ಶಿವಮೊಗ್ಗ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯರ ಮೇಲೆ ದೌರ್ಜನ್ಯ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೆ ರಾಜ್ಯವನ್ನು ಬೆಚ್ಚಿ ಬೀಳಿಸುವಂತ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಡೆದಿದೆ.
ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಪ್ರೀತಿಸಿ ವಿವಾಹವಾದ ಯುವತಿಯೊಬ್ಬಳನ್ನು ಪತಿಯೇ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ
ಕಳೆದ ಕೆಲ ದಿನಗಳ ಹಿಂದೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣವೊಂದು ದಾಖಲಾಗಿತ್ತು. ಅದಾದ ಕೆಲ ದಿನಗಳಲ್ಲೇ ಈ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಸಾಗರ ಮೂಲದ ಯುವಕ ಹಾಗೂ ಯುವತಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು, ಈ ಇಬ್ಬರು ಕೂಡ ಬೇರೆ ಬೇರೆ ಸಮುದಾಯದವರಾಗಿದ್ದರು ಎಂದು ಹೇಳಲಾಗುತ್ತಿದೆ.
ಮನೆಯವರಿಗೆ ಹೇಳದೆ ವಿವಾಹವಾಗಿದ್ದ ಜೋಡಿ
ಈ ಇಬ್ಬರೂ ಕೂಡ ಮನೆಯವರಿಗೆ ಹೇಳದೆ ವಿವಾಹವಾಗಿ ಕೊಪ್ಪದಲ್ಲಿ ವಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳವಾಗಿದೆ ಎನ್ನಲಾಗುತ್ತಿದೆ. ಇದಾದ ಬಳಿಕ ಯುವತಿ ಸಾಗರದಲ್ಲಿರುವ ಯುವಕನ ನಿವಾಸಕ್ಕೆ ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಯುವಕ ಯುವತಿಗೆ ತನ್ನ ತಾಯಿಯ ಮನೆಗೆ ಹೋಗುವಂತೆ ಸೂಚಿಸಿದ್ದಾನೆ.
ತಾನು ಮನೆಯವರೊಂದಿಗೆ ಮಾತಾಡಿ, ಮನೆಯವರನ್ನು ಒಪ್ಪಿಸಿ ನಿನ್ನನ್ನು ಮದುವೆಯಾಗುತ್ತೇನೆ ಅಲ್ಲಿಯವರೆಗೆ ನೀನು ನಿನ್ನ ತಾಯಿಯ ಮನೆಗೆ ಹೋಗಿರು ಎಂದು ಹೇಳಿದ್ದನಂತೆ. ಆದರೆ ಆತನ ಮಾತನ್ನು ಒಪ್ಪಿ ತಾಯಿಯ ಮನೆಗೆ ಹೋಗಲು ಹುಡುಗಿ ಸಿದ್ದಳಿರಲಿಲ್ಲ ಎಂದು ಹೇಳಲಾಗುತ್ತಿದೆ.
ಸಾಗರದಲ್ಲೂ ಮುಂದುವರೆದ ಗಲಾಟೆ
ಈ ವಿಚಾರವಾಗಿ ಸಾಗರಕ್ಕೆ ಬಂದ ಯುವತಿ ಆ ಯುವಕನ ಜೊತೆಗೆ ಗಲಾಟೆ ಮಾಡಿದ್ದಾಳೆ. ಬಳಿಕ ಇಬ್ಬರ ನಡುವಿನ ಕಲಹ ತಾರಕಕ್ಕೇರಿದೆ. ಅಲ್ಲದೆ ಯುವತಿ ಸಾಗರದಿಂದ ಹೆದ್ದಾರಿಪುರಕ್ಕೆ ಬಂದು ಯುವಕನ ಜೊತೆಗೆ ಮಾತನಾಡಿದ್ದಾಳೆ, ಅಲ್ಲಿಯೂ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯ ರಭಸಕ್ಕೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ಮಾಹಿತಿ ನೀಡಿವೆ.
ಯುವತಿಯನ್ನು ಕೊಂದು ಹುಗಿದು ಹಾಕಿದ್ದ ಪಾಪಿ ಪತಿ!
ಸದ್ಯ ಈ ಸಂಬಂಧ ಕೊಪ್ಪ ಪೊಲೀಸರು ಶಿವಮೊಗ್ಗದ ಆನಂದಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು ಹೆದ್ದಾರಿಪುರದಲ್ಲಿ ಮಹಜರ್ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಆನಂದಪುರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಆರೋಪಿ ಯುವಕ ಯುವತಿಯನ್ನ ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಹೂತು ಹಾಕಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲು
ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ನಾಳೆ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಯುವತಿಯ ಶವವನ್ನು ಮೇಲಕ್ಕೆ ತೆಗೆದು ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಗರ ಉಪ ವಿಭಾಗದ ಪೊಲೀಸರು ಕೊಪ್ಪ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.
