ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಜೇನುನೊಣಗಳ ಹಿಂಡಿನ ದಾಳಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅರಣ್ಯಾಧಿಕಾರಿ ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಾಗ್ಭಿದ್ ತಹಸಿಲ್‌ನ ಸತ್ಬಾಹಿನಿಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.ಆರು ತಿಂಗಳ ಮಗು ಸೇರಿದಂತೆ ಗಾಯಗೊಂಡ ನಾಲ್ವರು ನಾಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಹ್ಮಪುರಿ ವಿಭಾಗದ ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಸತ್ಬಾಹಿನಿ ದೇವಸ್ಥಾನಕ್ಕೆ ಸಂಜೆ ಭೇಟಿ ನೀಡಿದಾಗ, ಜೇನುನೊಣಗಳ ಹಿಂಡು ಆರು ಮಂದಿಯ ಮೇಲೆ ದಾಳಿ ಮಾಡಿದೆ.
ಇಬ್ಬರು ಸಂತ್ರಸ್ತರು ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಅವರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಬ್ರಹ್ಮಪುರಿ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಕೆಆರ್ ಧೋಂಡಾನೆ ತಿಳಿಸಿದ್ದಾರೆ.
ಜೇನುನೊಣಗಳ ದಾಳಿಯ ಹಿನ್ನೆಲೆಯಲ್ಲಿ ಕತ್ತಲಾದ ನಂತರ ಅರಣ್ಯ ಪ್ರದೇಶದಲ್ಲಿರುವ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಮತ್ತು ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕವನ್ನು ಸಹ ಅಳವಡಿಸಲಾಗಿದೆ ಎಂದು ಅವರು ಹೇಳಿದರು.