Breaking
Mon. Jun 17th, 2024

ಬಿ.ವೈ.ರಾಘವೇಂದ್ರಗೆ ವಿಜಯಮಾಲೆ

By Mooka Nayaka News Jun 4, 2024
Spread the love

ಶಿವಮೊಗ್ಗ: ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ  ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಮತ್ತೊಬ್ಬ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರ ನಡುವಿನ ಪೈಪೋಟಿಯ ಮಧ್ಯೆ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಬಂಡಾಯದ ಬಾವುಟ ಬೀಸಿದ್ದ ಕೆ.ಎಸ್.ಈಶ್ವರಪ್ಪ  ಅವರಿಗೆ ಹಿನ್ನಡೆಯಾದಂತಾಗಿದೆ.

ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಹಲವು ರೀತಿಯ ಅನುಕೂಲಕರ ವಾತಾವರಣವಿತ್ತು. ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ. ರಾಘವೇಂದ್ರ ಅವರ ಸಹೋದರ ಬಿ.ವೈ.ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ. ಅದರಲ್ಲೂ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ರೈಲು ಸಂಪರ್ಕ ಸೇರಿ ಹಲವು ರೀತಿಯ ಅಭಿವೃದ್ಧಿಗೆ ಕಾರಣರಾಗಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಇಲ್ಲಿ ಕೆಲಸ ಮಾಡುವ ಸಾಧ್ಯತೆ ಇತ್ತು. ಹಾಗಾಗಿ, ರಾಘವೇಂದ್ರ ಅವರು ಗೆಲುವಿನ ವಿಶ್ವಾಸದಲ್ಲಿದ್ದರು. ಅದರಂತೆ ಅವರು ಮುನ್ನಡೆ ಸಾಧಿಸಿದ್ದಾರೆ.

ಎಸ್.‌ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಅವರು ಎರಡನೇ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿ ರಣತಂತ್ರ ರೂಪಿಸಿದ್ದರು. ಶಿವರಾಜ್‌ ಕುಮಾರ್‌ ಅವರ ವರ್ಚಸ್ಸು, ಎಸ್‌. ಬಂಗಾರಪ್ಪ ಅವರ ಹೆಸರು, ಸಹೋದರ, ಸಚಿವ ಮಧು ಬಂಗಾರಪ್ಪ ನೆರವಿನ ಬಲದೊಂದಿಗೆ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದ ಕಾರಣ ಬಿ.ವೈ.ರಾಘವೇಂದ್ರ ಅವರಿಗೆ ಗೆಲುವು ಸುಲಭವಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಮತ್ತೆ ಹಿನ್ನಡೆಯಾದಂತಾಗಿದೆ.

ಕೆ.ಎಸ್.ಈಶ್ವರಪ್ಪ ಅವರು ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಬಂಡಾಯವೆದ್ದು, ಪಕ್ಷೇತರರಾಗಿ ಚುನಾವಣೆ ಕಣಕ್ಕಿಳಿದಿದ್ದರು. ಕಟ್ಟಾ ಆರೆಸ್ಸೆಸ್ಸಿಗರಾಗಿರುವ ಕೆ.ಎಸ್.ಈಶ್ವರಪ್ಪ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಮತಯಾಚನೆ ಮಾಡಿದ್ದರು. ಹಾಗಾಗಿ, ಇವರು ಮತಗಳನ್ನು ಒಡೆದಿದ್ದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿತ್ತು. ಇಷ್ಟೆಲ್ಲ ಕಾರಣಗಳಿಂದಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರವು ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿತ್ತು

.

 

 

Related Post