ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಿವಮೊಗ್ಗ ಬಳಿಕ ಈಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಉಗ್ರರ ಜಾಲ ಇರುವುದನ್ನು ಎನ್ಐಎ ಪತ್ತೆ ಮಾಡಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಚಿಕ್ಕಮಗಳೂರು ಕಳಸದಲ್ಲಿ ಆರೋಪಿಯೊಬ್ಬನನ್ನು ಬಂಧನಕ್ಕೊಳಪಡಿಸಿದೆ.
ಮುಝಮ್ಮಿಲ್ ಷರೀಫ್(30) ಬಂಧಿತ ಆರೋಪಿ. ಬುಧವಾರ ಮುಝಮ್ಮಿಲ್ ಶರೀಫ್ ಮನೆ ಮೇಲೆ ಎನ್‌ಐಎ ದಾಳಿ ನಡೆಸಿ, ಮೊಬೈಲ್ ಫೋನ್ ಮತ್ತು ಪ್ರಮುಖ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಆರೋಪಿಯನ್ನು ಬೆಂಗಳೂರಿಗೆ ಕರೆ ತಂದ ಅಧಿಕಾರಿಗಳು, ವಿಚಾರಣೆ ನಡೆಸಿದ ಬಳಿಕ ಬಂಧನಕ್ಕೊಳಪಡಿಸಿದ್ದಾರೆ.
ಬಾಂಬ್ ಸ್ಫೋಟ ನಡೆದ ದಿನ ಆತ ಬೆಂಗಳೂರಿನಲ್ಲೇ ಇದ್ದು ಸ್ಫೋಟದ ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಆರೋಪಿ ಮುಜಾಮಿಲ್ ಷರೀಫ್ ಈ ಸ್ಪೋಟಕ್ಕೆ ಸಂಚು ರೂಪಿಸಿ ಅದಕ್ಕೆ ಬೇಕಾದ ಸಾಮಗ್ರಿಗಳ ಸಾಗಾಟಕ್ಕೆ ನೆರವು ನೀಡಿರುವುದು ಸಹ ತನಿಖೆಯಿಂದ ಗೊತ್ತಾಗಿದೆ. ತಲೆ ಮರೆಸಿಕೊಂಡಿರುವ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವೀರ್ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳೆಂದು ಗೊತ್ತಾಗಿದೆ.
ಮಾ.1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ, ಪರಾರಿಯಾಗಿರುವ ಮುಸಾವೀರ್ ಪ್ರಕರಣದ ಪ್ರಮುಖ ಆರೋಪಿ. ಇದರ ಸೂತ್ರದಾರ ಅಬ್ದುಲ್ ಮತಿನ್ ತಾಹ ಎಂದು ಎನ್ಐಎ ತನಿಖೆಯಿಂದ ತಿಳಿದು ಬಂದಿದೆ. ತಲೆ ಮರೆಸಿಕೊಂಡಿರುವ ಇವರಿಬ್ಬರ ಬಂಧನಕ್ಕೆ ಎನ್ಐಎ ದೇಶದಾದ್ಯಂತ ಶೋಧ ಮುಂದುವರೆದಿದೆ.