Trending

ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್‌.ಟಿ. ಸೋಮಶೇಖರ್

Spread the love

ಬೆಂಗಳೂರು: ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯಾರ‍್ಯಾರೋ ಇದ್ದಾರೆ. ಆದರೆ, ನಮ್ಮಂತಹವರನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಯಶವಂತಪುರ ಕ್ಷೇತ್ರದ ಉಚ್ಚಾಟಿತ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್ ಹೇಳಿದ್ದಾರೆ.

ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು. 1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ ಎಂದು ತಿಳಿಸಿದ್ದಾರೆ.

ನಾನು ಕಾಂಗ್ರೆಸ್‌ ಅಥವಾ ಬಿಜೆಪಿ ಯಾರು ತಪ್ಪು ಮಾಡಿದರೂ ತಪ್ಪು ಅಂತಲೇ ಹೇಳಿದ್ದೇನೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಬಿಜೆಪಿಯಲ್ಲಿ ಮಾಡಬಾರದ್ದನ್ನು ಮಾಡಿರೋರು ಯಾರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವವರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿದರು.

ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.

[pj-news-ticker]