ಭದ್ರಾವತಿ : ರಾಜ್ಯ ಸರ್ಕಾರವು ಅನುಮೋದಿಸಿರುವ ನೂತನ ಜಾಹೀರಾತು ನೀತಿ–2026 ಅನ್ನು ತಕ್ಷಣ ಸ್ಥಗಿತಗೊಳಿಸಿ ಮರುಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಒತ್ತಾಯಿಸಿದರು.
ಸೋಮವಾರ ತಹಸೀಲ್ದಾರ್ ಪರುಸಪ್ಪ ಕುರುಬರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ನೂತನ ಜಾಹೀರಾತು ನೀತಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ “ಮರಣ ಶಾಸನ”ವಾಗಿದ್ದು, ಜಾರಿಗೆ ಬಂದಲ್ಲಿ ಸ್ಥಳೀಯ ಪತ್ರಿಕೆಗಳ ಅಸ್ತಿತ್ವವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ನೀತಿಯಲ್ಲಿರುವ ಕೆಲವು ಅಂಶಗಳಿಗೆ ಸ್ಪಷ್ಟತೆ ಇಲ್ಲದೆ ಇರುವುದರ ಜೊತೆಗೆ, ವಾಸ್ತವತೆಗೆ ಹೊಂದಿಕೆಯಾಗದ ನಿಯಮಗಳು ಸೇರಿರುವುದರಿಂದ ಪತ್ರಕರ್ತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ ಎಂದು ಅವರು ಹೇಳಿದರು.
ಈಗಾಗಲೇ ಸಣ್ಣ ಪತ್ರಿಕೆಗಳು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸಂಕಷ್ಟ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ, ಈ ನೀತಿ ಮತ್ತಷ್ಟು ತೊಂದರೆ ಉಂಟುಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಆದುದರಿಂದ, ಈ ನೀತಿಯನ್ನು ತಕ್ಷಣ ಜಾರಿಗೆ ತರದೆ, ವ್ಯಾಪಕ ಚರ್ಚೆ ನಡೆಸಿ ಕಾರ್ಯಸಾಧ್ಯ ತಿದ್ದುಪಡಿ ಮಾಡಿದ ಬಳಿಕವೇ ಜಾರಿಗೆ ತರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಿ. ಸುಭಾಷ್ರಾವ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಬಸವರಾಜ, ಕಾರ್ಯದರ್ಶಿ ಅನಂತಕುಮಾರ್, ಖಜಾಂಚಿ ಫಿಲೋಮಿನಾ ಆರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಎಚ್.ಕೆ ಶಿವಶಂಕರ್, ಎಚ್. ಶೈಲೇಶ್ ಕೋಠಿ ಹಾಗೂ ಸದಸ್ಯರಾದ ಎನ್. ಬಾಬು, ಸುದರ್ಶನ್, ಕೆ.ಎನ್ ರವೀಂದ್ರನಾಥ್, ಕೆ.ಇ ಪ್ರಶಾಂತ್, ಜಿ. ರಾಜು, ಸೈಯದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
