ಹೊಳೆಹೊನ್ನೂರು: ಗಣಪತಿ ವಿಸರ್ಜನೆ ಮಾಡುವ ವೇಳೆ ನೀರಿನಲ್ಲಿ ಮುಳುಗಿ 10 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕುರುಬರ ವಿಠಲಾಪುರದಲ್ಲಿ ನಡೆದಿದೆ.
ಇಟ್ಟಿಗೆಹಳ್ಳಿಯ ಕುಶಾಲ್ (10) ಮೃತ ಬಾಲಕ.
ಕುರುಬರ ವಿಠಲಾಪುರದ ಬೀದಿಯ ಪುಟಾಣಿ ಮಕ್ಕಳು ಮಣ್ಣು ಬಳಸಿ ತಾವೇ ಸ್ವತಃ ಗಣಪನ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸಿದ್ದರು. ಸೋಮವಾರ ಸಂಜೆ ವೇಳೆಗೆ ಗಣಪನನ್ನು ಭದ್ರಾ ನಾಲೆಗೆ ವಿಸರ್ಜನೆ ಮಾಡುವಾಗ ಈ ಅವಘಡ ನಡೆದಿದೆ.
ಪಾಲಕರಿಗೆ ತಿಳಿಸದೆ 3 ಮಕ್ಕಳು ನಾಲೆಗೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ನಾಲೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದ ವೇಳೆ ಆಯಾತಪ್ಪಿದ ಕುಶಾಲ್ ನಾಲೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.
ಸುದ್ದಿ ತಿಳಿದು ಸ್ಥಳೀಯರು ನಾಲೆಯಲ್ಲಿ ಹುಡುಕಾಡಿ ಬಾಲಕನ ಶವವನ್ನು ಹೊರ ತೆಗೆದಿದ್ದಾರೆ. ಇಟ್ಟಿಗೆಹಳ್ಳಿಯಲ್ಲಿ ಬಾಲಕನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
