Trending

ಶಾಲಾ ಪ್ರವೇಶಕ್ಕೆ ₹20 ಸಾವಿರ ಲಂಚ ಬೇಡಿಕೆ: ಭದ್ರಾವತಿಯಲ್ಲಿ ವಸತಿ ಶಾಲೆ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

Spread the love

ಭದ್ರಾವತಿ : ಶಾಲಾ ಪ್ರವೇಶಾತಿ ಕಲ್ಪಿಸಲು ಬಾಲಕಿಯ ತಂದೆಯಿಂದ ಲಂಚ ಪಡೆಯುತ್ತಿದ್ದ ಭದ್ರಾವತಿ ತಾಲೂಕಿನ ಹುಣಸೆಕಟ್ಟೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಲೆಗೆ ಬೀಳಿಸಿದ್ದಾರೆ.

ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ ಹಾಗೂ ಎಳನೀರು ವ್ಯಾಪಾರಿ ಮೇಘರಾಜ್ ಸಿ. ಅವರು ತಮ್ಮ ಪುತ್ರಿ ಕು. ದೀಕ್ಷಾಳನ್ನು ವಸತಿ ಶಾಲೆಯ 7ನೇ ತರಗತಿಗೆ ದಾಖಲಿಸಲು ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಪ್ರವೇಶಾತಿ ನೀಡುವ ಬದಲಾಗಿ ಶಾಲೆಗೆ ‘ಡ್ರಮ್ ಸೆಟ್’ ಖರೀದಿಸುವ ನೆಪದಲ್ಲಿ ₹20 ಸಾವಿರ ಲಂಚ ನೀಡುವಂತೆ ಪ್ರಾಂಶುಪಾಲ ನಾಮದೇವ್ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.

ಲಂಚ ನೀಡಲು ನಿರಾಕರಿಸಿದ ಮೇಘರಾಜ್ ಅವರು ಜುಲೈ 18ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018)ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು.

ಯೋಜನೆಯಂತೆ ದೂರುದಾರರು ಮುಂಗಡವಾಗಿ ₹10 ಸಾವಿರ ನೀಡಲು ಒಪ್ಪಿಕೊಂಡಿದ್ದರು. ಅದರಂತೆ ಸೋಮವಾರ ಮಧ್ಯಾಹ್ನ ಸುಮಾರು 12.20ಕ್ಕೆ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ ನಾಮದೇವ್ ಅವರು ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದರು.

ದಾಳಿಯ ವೇಳೆ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಮುಂದಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರುದ್ರೇಶ್ ಕೆ.ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

[pj-news-ticker]