ಭದ್ರಾವತಿ : ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್. ಗೌಡ ಅವರು ಯುಪಿಎಸ್ಸಿ ನಡೆಸುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶ್ರೇಯಾ ಅವರು 1ರಿಂದ 10ನೇ ತರಗತಿವರೆಗೆ ಭದ್ರಾವತಿಯ ಬಿಜಿಎಸ್ ಕಾರೇಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಬೆಂಗಳೂರಿನ ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಪ್ರಸ್ತುತ ಮಂಗಳೂರಿನ ಸುರತ್ಕಲ್ನ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ಕನಸು ಹೊಂದಿದ್ದ ಶ್ರೇಯಾ ಅವರಿಗೆ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಎನ್ಡಿಎಯಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಿರುವ ವಿಷಯ ತಿಳಿದಿತ್ತು. ಅಂದಿನಿಂದಲೇ ಎನ್ಡಿಎ ಸೇರುವ ಗುರಿಯೊಂದಿಗೆ ತಯಾರಿ ನಡೆಸಿದ್ದ ಅವರು, ಮೊದಲ ಪ್ರಯತ್ನದಲ್ಲೇ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಶ್ರೇಯಾ ಅವರ ತಂದೆ ನಾಗೇಂದ್ರ ಜೆ. ಅವರು ವಿಐಎಸ್ಎಲ್ ಕಾರ್ಖಾನೆಯ ನೌಕರರಾಗಿದ್ದು, ತಾಯಿ ಡಾ. ಆಶಾ ಬಿ.ಎಂ. ಅವರು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳ ಕನಸಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡಿದ ಪೋಷಕರ ಸಹಕಾರವೂ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಶ್ರೇಯಾ ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಜಿಲ್ಲೆಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಯಶಸ್ಸು ಜಿಲ್ಲೆಯ ಯುವಜನತೆಗೆ ಪ್ರೇರಣೆಯಾಗಿದೆ.
