ಬೆಂಗಳೂರು: ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಾಜಾಜಿನಗರದ ಲುಲುಮಾಲ್ ಬಳಿ ಬೆಂಕಿಗೆ ಆಹುತಿಯಾಗಿದ್ದು, ಪ್ರಯಾಣಿಕರು ಪಾರಾಗಿದ್ದಾರೆ.
ಗುರುವಾರ ರಾತ್ರಿ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟಿದ್ದ ಬಸ್ನಲ್ಲಿ ಲುಲುಮಹಲ್ ಬಳಿ ತಲುಪುವಾಗ ಬೆಂಕಿ ಕಾಣಿಸಿಕೊಂಡಿತು.
ಇದನ್ನು ಕಂಡ ಬೈಕ್ ಸವಾರರೊಬ್ಬರು ಎಂಜಿನ್ ಅಡಿಯಲ್ಲಿ ಬೆಂಕಿ ಉರಿಯುತ್ತಿದೆ ಎಂದು ಚಾಲಕನಿಗೆ ಮಾಹಿತಿ ನೀಡಿದ್ದರು.
ಚಾಲಕ ತಕ್ಷಣ ಬಸ್ ನಿಲ್ಲಿಸಿದಾಗ ಒಳಗಿದ್ದ ಎಲ್ಲ 21 ಪ್ರಯಾಣಿಕರು ಇಳಿದು ಅಪಾಯದಿಂದ ಪಾರಾದರು. ಕೆಲವೇ ನಿಮಿಷಗಳಲ್ಲಿ ಬೆಂಕಿ ಪೂರ್ತಿ ಬಸ್ಗೆ ಆವರಿಸಿತು. ರಾಜಾಜಿನಗರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು.
‘ಬಸ್ ಸಂಚಾರ ಆರಂಭಿಸಿ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೈಕ್ ಸವಾರನಿಂದ ಮಾಹಿತಿ ಬಂದ ತಕ್ಷಣ ಬಸ್ ನಿಲ್ಲಿಸಿದರಲ್ಲದೇ ಎಲ್ಲ ಪ್ರಯಾಣಿಕರನ್ನು ಚಾಲಕ ಮತ್ತು ನಿರ್ವಾಹಕರು ಸುರಕ್ಷಿತವಾಗಿ ಇಳಿಯುವಂತೆ ನೋಡಿಕೊಂಡರು’ ಎಂದು ಮಾಗಡಿ ರಸ್ತೆ ನಿಲ್ದಾಣದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಡೀಸೆಲ್ ಸೋರಿಕೆಯಿಂದ ಇಲ್ಲವೇ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಯಾಣಿಕರನ್ನು ನಿಗಮದ ಪರ್ಯಾಯ ವಾಹನಗಳಲ್ಲಿ ಕಳುಹಿಸಿಕೊಡಲಾಯಿತು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
