Trending

ಭದ್ರಾವತಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ : ಯುಗ ಬದಲಾಗಿದರೂ ರಂಗಭೂಮಿಯ ನಾದ ನಿರಂತರ – ಗಂಗಾನಾಯ್ಕ ಗೊಂದಿ

Spread the love

ಭದ್ರಾವತಿ : ನಗರದ ರಂಗ ಕಲಾವಿದರ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಗಾಂಧಿ ಪಾರ್ಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯ ರಂಗ ಕಲಾವಿದರಾದ ಡಿ. ರುದ್ರಯ್ಯ ಅವರು ಚಂಡಿಕೆ ಬಾರಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭದ್ರಾವತಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಂಗಾನಾಯ್ಕ ಗೊಂದಿ ಅವರು ಮಾತನಾಡಿ, ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ನಗರದಲ್ಲಿ 40ಕ್ಕೂ ಹೆಚ್ಚು ರಂಗ ಕಲಾವಿದರ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ನೆನಪಿಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಬಹುಮಾನಗಳನ್ನು ಗೆದ್ದಿದ್ದ ರಂಗ ತಂಡಗಳ ಸಾಧನೆ ಶ್ಲಾಘನೀಯವಾದರೂ, ನಗರದಲ್ಲಿ ಇಂದಿಗೂ ಒಂದು ಸುಸಜ್ಜಿತ ರಂಗಮಂದಿರ ನಿರ್ಮಾಣವಾಗದಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.

ರಂಗಭೂಮಿ ಕಲಾವಿದರಿಗೆ ಮಾತೃಭೂಮಿಯಂತಿದ್ದು, ಚಲನಚಿತ್ರ ಹಾಗೂ ಡಿಜಿಟಲ್ ಮಾಧ್ಯಮಗಳ ಭರಾಟೆಯಿಂದ ರಂಗಭೂಮಿ ಕ್ಷೀಣಿಸುತ್ತಿರುವಂತೆ ಕಂಡರೂ ಅದು ಶಾಶ್ವತವಲ್ಲ. ಕಾಲಚಕ್ರ ಬದಲಾದಾಗ ರಂಗಭೂಮಿಗೆ ಮತ್ತೆ ಒಳ್ಳೆಯ ದಿನಗಳು ಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಂಗ ಕಲಾವಿದರ ಸಂಘದ ಉಪಾಧ್ಯಕ್ಷರಾದ ದಿವಾಕರ್ ಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ತಮಟೆ ಜಗದೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು. ಖಜಾಂಚಿ ಕೆ.ಎಸ್. ರವಿಕುಮಾರ್, ಸಹ ಕಾರ್ಯದರ್ಶಿ ಚಿದಾನಂದ ಬಿ., ಸದಸ್ಯರಾದ ಪ್ರವೀಣ್ ಕುಮಾರ್ ಬಿ., ಮಂಜುಳ ಎಂ., ರತ್ನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಕಲಾಸಂಘದ ವತಿಯಿಂದ ಕಿರುನಾಟಕ ಪ್ರದರ್ಶನಗೊಂಡು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

[pj-news-ticker]