ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಾದಿಕ್ ಪೈಲ್ವಾನ್ ಅವರೊಂದಿಗೆ ಪಕ್ಷದ ನಾಯಕರು ನಡೆಸಿದ ಕೊನೆ ಕ್ಷಣದ ಮಾತುಕತೆ ಫಲಪ್ರದವಾಗಿಲ್ಲ.
ಕಾಂಗ್ರೆಸ್ ಮುಸ್ಲಿಂ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ , ಶಾಸಕ ರಿಜ್ವಾನ್ ಅರ್ಷದ್ ಅವರು ಗುರುವಾರ ಬೆಳಗ್ಗೆಯಿಂದ ನಡೆಸಿದ ಮಾತುಕತೆಗೂ ಮನ ಬದಲಿಸಿದ ಸಾದಿಕ್ ಅವರು ಯಾವ ಬೇಡಿಕೆಗಳಿಗೂ ಬಗ್ಗದೆ ನಾಮಪತ್ರ ಹಿಂಪಡೆಯದೇ ಕಣದಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ.
ಬಳಿಕ ಸಲೀಂ ಹಾಗೂ ರಿಜ್ವಾನ್ ಮಾಧ್ಯಮ ಹೇಳಿಕೆ ನೀಡಿದ್ದು,”ನಾಮಪತ್ರ ಹಿಂಪಡೆಯುವ ಸಮಯ ಮುಗಿದಿದೆ. ಸಾದಿಕ್ ಅವರೊಂದಿಗೆ ಇನ್ನೊಮ್ಮೆ ಮಾತಾಡುತ್ತೇವೆ. ಅವರು ಕಾಂಗ್ರೆಸ್ ನೊಂದಿಗೆ ಇರುತ್ತಾರೆ. ಅವರಿಗೆ ಪಕ್ಷದಿಂದ ಏನು ಅನುಕೂಲ ಮಾಡಬೇಕೋ ಮಾಡಿ ಕೊಡುತ್ತೇವೆ” ಎಂದರು.
ನಾಮಪತ್ರ ಹಿಂಪಡೆಯುವ ಅವಧಿ ಮುಗಿದರೂ ಸಾದಿಕ್ ಮನೆಯಲ್ಲಿ ಸಲೀಂ ಅಹ್ಮದ್, ರಿಜ್ವಾನ್ ಸೇರಿ ಇನ್ನಿತರ ಮುಖಂಡರೊಂದಿಗೆ ಮಾತುಕತೆ ಮುಂದುವರಿಯಿತು. ಈ ನಡುವೆ ಸೂಚಕ-ಅನುಮೋದಕರು 2.50ಕ್ಕೆ ನಾಮಪತ್ರ ವಾಪಸ್ ಪಡೆಯಲು ಬಂದಿದ್ದು ಸಹಿ ಹೊಂದಾಣಿಕೆಯಾಗದೇ ಚುನಾವಣಾಧಿಕಾರಿ ಅರ್ಜಿ ತಿರಸ್ಕರಿಸಿದ್ದಾರೆ. ಪ್ರಕ್ರಿಯೆಯನ್ನು ಗಮನಿಸಲು ಚುನಾವಣ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
