ಸಿಂಧ್ (ಪಾಕಿಸ್ತಾನ): ಆ ಹೆಣ್ಣು ಶಿಶು ಇನ್ನೂ ಸರಿಯಾಗಿ ಕಣ್ಣು ಬಿಟ್ಟು ಪ್ರಪಂಚವನ್ನೇ ನೋಡಿರಲಿಲ್ಲ. ಕೇವಲ 15 ದಿನಗಳ ನವಜಾತ ಹೆಣ್ಣು ಮಗು ಅದು. ಆ ಮಗುವನ್ನ ಹೆತ್ತ ತಂದೆಯೇ ಜೀವಂತವಾಗಿ ಸಮಾಧಿ ಮಾಡಿದ್ದಾನೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ವಿಶ್ವಾದ್ಯಂತ ಗಮನ ಸೆಳೆದಿದೆ. ಚರ್ಚೆಗೆ ಗ್ರಾಸವಾಗಿದೆ!
ಬಡತನ ಏನೆಲ್ಲಾ ಮಾಡಿಸುತ್ತೆ!
ಹೆತ್ತ ತಂದೆಯೇ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಲು ಕಾರಣ ಬಡತನ. ಆ ಮಗುವಿಗೆ ವೈದ್ಯಕೀಯ ನೆರವಿನ ಅಗತ್ಯತೆ ಇತ್ತು, ಚಿಕಿತ್ಸೆ ಬೇಕಿತ್ತು. ಆದರೆ, ತಂದೆಯ ಬಳಿ ಹಣ ಇರಲಿಲ್ಲ. ಹೀಗಾಗಿ, ತನ್ನ ಮಗು ನೋವಿನಿಂದ ಬಳಲುವುದನ್ನು ನೋಡಲು ಸಾಧ್ಯವಾಗದೆ ಆರೋಪಿ ತಂದೆ ತಯ್ಯಬ್ ಈ ಕೃತ್ಯ ಎಸಗಿದ್ದಾನೆ ಎಂದು ಪಾಕಿಸ್ತಾನದ ಎಆರ್‌ವೈ ನ್ಯೂಸ್ ವರದಿ ಮಾಡಿದೆ.
ತನ್ನ ನವಜಾತ ಹೆಣ್ಣು ಶಿಶುವನ್ನು ಜೀವಂತವಾಗಿ ಸಮಾಧಿ ಮಾಡುವ ಮುನ್ನ ಗೋಣಿ ಚೀಲದಲ್ಲಿ ಹಾಕಿ ಚೀಲವನ್ನು ಮಣ್ಣಿನಡಿ ಹೂತು ಹಾಕಿದೆ ಎಂದು ಆರೋಪಿ ತಂದೆ ತಯ್ಯಬ್ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ಧಾನೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯದ ಆದೇಶದ ಅನ್ವಯ ಸಮಾಧಿಯಲ್ಲಿ ಇದ್ದ ಮಗುವಿನ ಕಳೇಬರ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಲಾಗಿದೆ.
ಪಾಕಿಸ್ತಾನದಲ್ಲಿ ಲೀಟರ್ ಹಾಲಿಗೇ 370 ರೂ..
ಇನ್ನು ಚಿಕಿತ್ಸೆ ಸುಲಭವೇ?ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ದೇಶದಲ್ಲಿ ಒಂದು ಲೀಟರ್ ಹಾಲಿಗೆ 370 ರೂ. ಇದೆ. ಮಕ್ಕಳು ಕುಡಿಯಲು ಹಾಲು ಸಿಗದಂಥಾ ಪರಿಸ್ಥಿತಿ ಏರ್ಪಟ್ಟಿದೆ. ಹೀಗಿರುವಾಗ ವೈದ್ಯಕೀಯ ಚಿಕಿತ್ಸಾ ವೆಚ್ಚವಂತೂ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ದರ ಕೂಡಾ ಏರಿಕೆಯಾಗಿದೆ. ಗೋಧಿ ಹಿಟ್ಟು ಸೇರಿದಂತೆ ಅಗತ್ಯ ಜೀವನಾವಶ್ಯಕ ವಸ್ತುಗಳೇ ಕೈಗೆಟುಕದಂತಾಗಿದೆ.
ಜನರು ದುಡಿಯುವ ಹಣ ಯಾವುದಕ್ಕೂ ಸಾಲದಂತಾಗಿರುವ ಈ ಸನ್ನಿವೇಶದಲ್ಲಿ ಉದ್ಯೋಗಗಳೂ ಕೂಡಾ ಸಿಗದೆ ಪಾಕಿಸ್ತಾನದ ಜನರು ಸಂಕಷ್ಟದಲ್ಲಿದ್ದಾರೆ. ಇಂಥಾ ಸಂದರ್ಭದಲ್ಲಿ ಮಾರಣಾಂತಿಕ ರೋಗಗಳು ಎದುರಾದರೆ ದೇವರೇ ದಿಕ್ಕು ಎಂಬಂಥಾ ಪರಿಸ್ಥಿತಿ ಇದೆ. ಬಡವರು ತಮ್ಮ ಕುಟುಂಬಸ್ಥರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋದಿರಲಿ, ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡೋದೇ ಕಷ್ಟ ಎಂಬಂಥಾ ಪರಿಸ್ಥಿತಿ ಏರ್ಪಟ್ಟಿದೆ.