ಶಿವಮೊಗ್ಗ : ನಗರದಲ್ಲಿ ಸೋಮವಾರ ಸಂಜೆ ಗುಡುಗು ಹಾಗೂ ಸಿಡಿಲು ಸಹಿತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತು.
ಸಂಜೆ ಸುಮಾರು 7 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೇ ಸುರಿಯಿತು. ಕಳೆದೊಂದು ವಾರದಲ್ಲಿ ಎರಡನೇ ಬಾರಿಗೆ ಮಳೆ ಆರ್ಭಟಿಸಿದ್ದು, ಇತ್ತೀಚಿನ ನಾಲ್ಕು ದಿನಗಳಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಮಲೆನಾಡ ಜನರಿಗೆ ತಂಪಿನ ಅನುಭವ ನೀಡಿತು.
ಮಳೆಯ ಮುನ್ನವೇ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಗುಡುಗು, ಮಿಂಚಿನೊಂದಿಗೆ ಜೋರಾಗಿ ಮಳೆ ಆರಂಭವಾಯಿತು. ದಿಢೀರ್ ಸುರಿದ ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಂಜೆ ವೇಳೆ ಹೊರಗಿದ್ದವರು ಸಂಕಷ್ಟಕ್ಕೆ ಸಿಲುಕಿದರು. ಅನೇಕರು ಕಟ್ಟಡಗಳ ನೆರಳಿನಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಉಂಟಾಯಿತು.
ಇದೇ ವೇಳೆ, ಮಳೆ ಆರ್ಭಟಿಸುತ್ತಿದ್ದಂತೆಯೇ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ತೊಂದರೆ ಎದುರಾಯಿತು.
