ಶಿವಮೊಗ್ಗ : ನಮ್ಮನ್ನು ಶೂಟ್ ಮಾಡಿ ಎಂದು ಹೇಳಿದಾಗ ಅವರು ಮೋದಿ ಕೊ ಬೊಲ್ ಎಂದು ಹೇಳಿ ಹೋದ್ರು ಎಂದು ಉಗ್ರವಾದಿಗಳ ಗುಂಡಿಗೆ ಬಲಿಯಾದ ಮಂಜುನಾಥ ರಾವ್ ಪತ್ನಿ ಪಲ್ಲವಿ ತಿಳಿಸಿದ್ದಾರೆ.
ಮಂಜುನಾಥ ರಾವ್ ಅವರ ಅಂತ್ಯ ಸಂಸ್ಕಾರ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಏಪ್ರಿಲ್ 19 ರಿಂದ ಏಪ್ರಿಲ್ 24 ರ ತನಕ ಕಾಶ್ಮೀರದ ಪ್ರವಾಸ ಪ್ಲಾನ್ ಮಾಡಿ ಹೋಗಿದ್ದೆವು. ಏಪ್ರಿಲ್ 22 ರಂದು ಮಧ್ಯಾಹ್ನ 12:30 ಕ್ಕೆ ನಾವು ಪೆಹಲ್ಗಾವ್ ತಲುಪಿದೆವು ಎಂದರು.
ಘಟನೆಯ ಬಗ್ಗೆ ವಿವರಿಸಿದ ಪಲ್ಲವಿ: ಅಲ್ಲಿ ಗುಡ್ಡದ ಮೇಲೆ ತೆರಳಲು ಕುದುರೆ ಮೂಲಕವೇ ಹೋಗಬೇಕಾಗುತ್ತೆ, ಹೀಗಾಗಿ ನಾವು ಮೂರು ಕುದುರೆ ಬಾಡಿಗೆ ಪಡೆದು ನಾನು, ನನ್ನ ಮಗ ಹಾಗೂ ಮಂಜುನಾಥ್ ಹೋದೆವು. ಎಲ್ಲಿ ಅಟ್ಯಾಕ್ ಆಗಿದೆಯೋ ಅಲ್ಲಿಗೆ ಹೋದ ಕೆಲವೇ ಕ್ಷಣಗಳಲ್ಲಿ ಪಟಾಕಿ ಹೊಡೆದ ಶಬ್ದ ಬಂತು. ನಾವು ಪ್ರಾಣಿಗಳನ್ನು ಓಡಿಸಲು ಬಳಸಿರಬಹುದೆನೋ ಅಂದುಕೊಂಡಿದ್ಧೆವು. ಮತ್ತೆ ಮೂರು ನಿಮಿಷದ ನಂತರ ಮತ್ತೆ ಅದೇ ತರ ಸೌಂಡ್ ಬಂತು. ಆಗ ಅದು ಆರ್ಮಿ ಅವರ ಟ್ರೈನಿಂಗ್ ಅಂದುಕೊಂಡು ಸುಮ್ಮನಾದೆವು ಎಂದು ಹೇಳಿದರು.
ಇದೇ ವೇಳೆ, ನನ್ನ ಮಗನಿಗೆ ಸ್ನ್ಯಾಕ್ಸ್ ಕೊಡಿಸಲು ನಾನು ನಮ್ಮ ಮನೆಯವರು ಅಲ್ಲೆ ಇದ್ದ ಟೆಂಟ್ ಬಳಿ ಹೋಗ್ತಾ ಇದ್ವಿ. ನನ್ನ ಮಗ ಒಂದು ಕಡೆ ಕುಳಿತುಕೊಂಡಿದ್ದ. ನಮ್ಮ ಮನೆಯವರು ಮಗನನ್ನು ಕರೆದುಕೊಂಡು ಬರಲು ಹೇಳಿದ್ರು. ಅದರಂತೆ ನಾನು ಮಗನನ್ನು ಕರೆದುಕೊಂಡು ಬರಲು ನಾಲ್ಕು ಹೆಜ್ಜೆ ಇಟ್ಟಿಲ್ಲ ಆಗ ಜನ ಕೂಗಿಕೊಂಡು ಓಡಿ ಬಂದರು. ಆಗ ಫುಲ್ ಫೈರಿಂಗ್ ಆಗುತ್ತಿತ್ತು ಎಂದು ವಿವರಿಸಿದರು.
ತಿರುಗಿ ನೋಡುವಷ್ಟರಲ್ಲಿ ಮನೆಯವರು ನೆಲಕ್ಕೆ ಬಿದ್ದಿದ್ರು; ನಾನು ತಿರುಗಿ ನೋಡುವಷ್ಟರಲ್ಲಿ ನನ್ನ ಮನೆಯವರ ಮೇಲೆ ಫೈರಿಂಗ್ ಆಗಿತ್ತು. ಆಗ್ಲೆ ನೆಲದ ಮೇಲೆ ಬಿದ್ದಿದ್ದರು. ಆಗ್ಲೆ ಅವರು ಇರಲಿಲ್ಲ. ನಮ್ಮ ಮನೆಯವರ ಕುತ್ತಿಗೆಗೆ ಒಂದು ಬುಲೆಟ್ ಬಿದ್ದಿತ್ತು. ಅವರು ತೀರಿ ಹೋಗಿದ್ದರು. ಅವರ ಬಳಿ ಓಡಿ ಹೋದ್ವಿ. ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ರು. ಈ ತರ ಯಾರಿಗೂ ಆಗುವುದು ಬೇಡ ಅಂತ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಗದ್ಗದಿತರಾದರು.
