ಬೀದರ್ : ರಾಜ್ಯದಲ್ಲಿ ಆನ್ಲೈನ್ ಗೇಮಿಂಗ್ ಚಟದಿಂದ ಮತ್ತೊಂದು ದುಃಖಕರ ಘಟನೆ ಬೆಳಕಿಗೆ ಬಂದಿದೆ. ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ವಸತಿ ನಿಲಯದಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಅನಿಷ್ಕಾರ್ ಚವ್ಹಾಣ್ (21) ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾ ಮೂಲದವರಾಗಿದ್ದು, ಬ್ರಿಮ್ಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅನಿಷ್ಕಾರ್ ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸುಮಾರು ₹80 ಸಾವಿರ ಹಣ ಕಳೆದುಕೊಂಡಿದ್ದನು. ಹಣ ನಷ್ಟದಿಂದ ಉಂಟಾದ ಮಾನಸಿಕ ಒತ್ತಡಕ್ಕೆ ತುತ್ತಾಗಿ, ವಸತಿ ನಿಲಯದ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರಿಂದ ದೂರು ಸ್ವೀಕರಿಸುವ ನಿರೀಕ್ಷೆಯಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಯುವಕರಲ್ಲಿ ಹೆಚ್ಚುತ್ತಿರುವ ಆನ್ಲೈನ್ ಗೇಮಿಂಗ್ ವ್ಯಸನದ ಅಪಾಯವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ
