ಶಿಕಾರಿಪುರ: ಶಿಕಾರಿಪುರ ಗ್ರಾಮಾಂತರ ಪೊಲೀಸರು ಅಕ್ರಮ ನಾಡ ಬಂದೂಕು ತಯಾರಿ ಹಾಗೂ ಮಾರಾಟ ಜಾಲವನ್ನು ಭೇದಿಸಿ, ಮನೆಯಲ್ಲೇ ಬಂದೂಕು ತಯಾರಿಸುತ್ತಿದ್ದ ಬಡಗಿಯೊಬ್ಬರನ್ನು ಬಂಧಿಸಿ ಏಳು ಸಿಂಗಲ್ ಬ್ಯಾರೆಲ್ ನಾಡ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಮೂರನೇ ತಿರುವಿನ ನಿವಾಸಿ ಲಕ್ಷ್ಮಣಪ್ಪ (67) ಬಂಧಿತ ಆರೋಪಿ. ಅಕ್ರಮವಾಗಿ ನಾಡ ಬಂದೂಕು ತಯಾರಿಸಲಾಗುತ್ತಿದೆ ಎಂಬ ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮನೆ ಪರಿಶೀಲನೆ ಕೈಗೊಂಡರು.
ದಾಳಿಯ ವೇಳೆ ಲಕ್ಷ್ಮಣಪ್ಪ ಅವರ ಮನೆಯ ಪಕ್ಕದ ಮನೆಯಲ್ಲಿ ನಾಡ ಬಂದೂಕುಗಳು ಹಾಗೂ ಅವುಗಳ ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳು ಪತ್ತೆಯಾಗಿವೆ. ಆರೋಪಿ ತನ್ನ ಮನೆಯನ್ನೇ ಕಾರ್ಖಾನೆಯಂತೆ ಬಳಸಿಕೊಂಡು ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
ಅಕ್ರಮ ಬೇಟೆಯಾಟ ನಡೆಸುವವರಿಗೆ ಈ ನಾಡ ಬಂದೂಕುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಈ ಸಂಬಂಧ ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ–2019ರ ಕಲಂ 25 (1)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಬಂಧಿತ ಆರೋಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಲ್ಪಟ್ಟಿದ್ದಾನೆ. ಈ ಕಾರ್ಯಾಚರಣೆಯನ್ನು ಶಿಕಾರಿಪುರ ಪಟ್ಟಣ ಪಿಎಸ್ಐ ಶರತ್ ಅವರ ನೇತೃತ್ವದಲ್ಲಿ ಕೊಟ್ರೇಶಪ್ಪ, ಪ್ರದೀಪ್ ಕೆ., ನಾಗರಾಜ, ರವಿನಾಯ್ಕ ಹಾಗೂ ರವಿಕುಮಾರ್ ಒಳಗೊಂಡ ವಿಶೇಷ ತಂಡ ನಡೆಸಿದೆ ಎಂದು ಪೊಲೀಸ್ ಇಲಾಖೆ ಪ್ರಕಟಿಸಿದೆ.
