ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಇಂದು ಧಿಡೀರ್ ದಾಳಿ ನಡೆಸಿದ್ದಾರೆ. ನಗರದ ಪಾಲಿಕೆಯ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ ಹಾಗೂ ಟಪಾಲು ವಿಭಾಗದ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿಗಳು ಗಾಬರಿಗೊಂಡಿದ್ದು, ವಿಲೇವಾರಿಯಾಗದೆ ಬಾಕಿ ಉಳಿದಿರುವ ಅರ್ಜಿಗಳ ಕುರಿತು ಅಧಿಕಾರಿಗಳನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಶ್ನೆಗಳು ಎದುರಾದವು.
ಇದೇ ವೇಳೆ ಬೆಳಿಗ್ಗೆ 11 ಗಂಟೆಯಾದರೂ ಕೆಲವು ಕಚೇರಿಗಳ ಬೀಗ ಸಿಗದೆ ಅಧಿಕಾರಿಗಳು ಪರದಾಡಿದ ಘಟನೆಗೆ ಲೋಕಾಯುಕ್ತ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತ್ಯ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೆ ಸಿಬ್ಬಂದಿಗಳು ಗೊಂದಲಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ.
ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಮುಂದುವರಿದಿದ್ದು, ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
