ಭದ್ರಾವತಿ: ಸಿರಿಗೆರೆ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಈ ಬಾರಿ ತರಳಬಾಳು ಹುಣ್ಣಿಮೆ ಮಹೋತ್ಸವ–2026 ಅನ್ನು ನಗರದ ಹುಡ್ಕೋ ಕಾಲೋನಿ ವಿಐಎಸ್ಎಲ್ ಹೆಲಿಪ್ಯಾಡ್ ಆವರಣದಲ್ಲಿ ಜನವರಿ 24ರಿಂದ ಫೆಬ್ರವರಿ 1ರವರೆಗೆ ಆಯೋಜಿಸಲಾಗಿದೆ ಎಂದು ಸಿರಿಗೆರೆ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.
ಮಂಗಳವಾರ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 76 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ನಾಡಹಬ್ಬದ ರೂಪ ಪಡೆದುಕೊಂಡಿದ್ದು, ಜಾತಿ–ಮತ–ಪ್ರಾಂತ್ಯಗಳ ಭೇದವಿಲ್ಲದೆ ಎಲ್ಲರನ್ನು ಭಾವೈಕ್ಯತೆಯ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಸಮಾರಂಭವಾಗಿದೆ ಎಂದು ಹೇಳಿದರು.
12ನೇ ಶತಮಾನದ ವಿಶ್ವಬಂಧು ಮರುಳಸಿದ್ಧರು ಸ್ಥಾಪಿಸಿದ ಸದ್ಧರ್ಮ ಪೀಠದ ಆಶೀರ್ವಾದ ಪರಂಪರೆಯೇ ತರಳಬಾಳು ಜಗದ್ಗುರುಗಳಾಗಿ ಮುಂದುವರಿದಿದ್ದು, ಮಾಘ ಶುದ್ಧ ಪೂರ್ಣಿಮೆಯಂದು ನಡೆದ ಐತಿಹಾಸಿಕ ಘಟನೆಯ ನೆನಪಿನಲ್ಲಿ ಈ ಹುಣ್ಣಿಮೆಯನ್ನು “ತರಳಬಾಳು ಹುಣ್ಣಿಮೆ” ಎಂದು ಆಚರಿಸಲಾಗುತ್ತಿದೆ ಎಂದರು.
ಈ ಬಾರಿ ಮಹೋತ್ಸವವು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹೊಸ ಆಯಾಮ ಪಡೆದಿದ್ದು, ಪ್ರತಿದಿನ ಸಂಜೆ 6.30ಕ್ಕೆ ವಿಭಿನ್ನ ವಿಷಯಾಧಾರಿತ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ.
ಕಲೆ–ಸಂಸ್ಕೃತಿ, ಆರೋಗ್ಯ–ಸಮಾಜ, ರಾಜಕಾರಣ–ಸಮಾಜ, ಸಾಹಿತ್ಯ–ಶಿಕ್ಷಣ, ಕೃಷಿ–ಸಮಾಜ, ಸರ್ವಧರ್ಮ ಸಮನ್ವಯ, ಮಾಧ್ಯಮ–ಸಮಾಜ, ನ್ಯಾಯಾಂಗ–ಸಮಾಜ ಹಾಗೂ ಧರ್ಮ–ವಿಜ್ಞಾನ–ಸಮಾಜ ವಿಷಯಗಳ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ.
ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ಕ್ರೀಡಾ ಸ್ಪರ್ಧೆಗಳು, ವಿಜ್ಞಾನ ಪ್ರದರ್ಶನ, ಪ್ರತಿಭಾನ್ವೇಷಣೆ, ರಾಜ್ಯಮಟ್ಟದ ಯೋಗಾಸನ ಮತ್ತು ಕುಸ್ತಿ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಾಡಿನ ವಿವಿಧ ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಲಿದ್ದಾರೆ. ಮಹೋತ್ಸವವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷ ಜೆ.ಸಿ ಗೀತಾರಾಜಕುಮಾರ್, ಪ್ರಮುಖರಾದ ಕೆ.ಜಿ ರವಿಕುಮಾರ್, ಕೆ.ಎಚ್ ತೀರ್ಥಯ್ಯ, ಬಿ.ಕೆ ಮೋಹನ್, ಪ್ರಕಾಶ್ ರಾಥೋಡ್, ಮಲ್ಲಯ್ಯ, ಕೆ.ಎನ್ ಹೇಮಂತ್, ಬಿ.ಕೆ ಶಿವಕುಮಾರ್, ಬಿ.ಎಸ್ ಗಣೇಶ್, ಎಚ್.ಬಿ ಸಿದ್ದೇಶ್, ಕೆ.ಎಸ್ ವಿಜಯಕುಮಾರ್, ಪರಮೇಶ್ವರಪ್ಪ, ಸಿದ್ದಲಿಂಗಯ್ಯ, ಡಾ. ಎಂ.ವಿ ಅಶೋಕ್, ಭಾಸ್ಕರ್ ಬಾಬು, ಬಿ. ಮೂರ್ತಿ ಪರಮೇಶ್ವರಪ್ಪ, ಬಿ.ಎನ್ ರಾಜು, ಸಂಜೀವ ಕುಮಾರ್, ಕೃಷ್ಣಕುಮಾರ್ ಮಾನೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.
