ಶಿವಮೊಗ್ಗ: ಅಕ್ರಮದ ಆರೋಪದ ಕಾರಣ ತೀರ್ಥಹಳ್ಳಿಯ ಮೂರು ಸಹಕಾರ ಸಂಸ್ಥೆಗಳ ಬುಧವಾರ ಸಂಜೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.ಇದೇ ವೇಳೆ, ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಇವುಗಳು ರಾಜಕಾರಣಿಯೊಬ್ಬರ ಬೆಂಬಲಿಗರು ಇರುವ ಸಹಕಾರ ಸಂಸ್ಥೆ ಎನ್ನಲಾಗಿದೆ. ಚುನಾವಣೆ ವೇಳೆ ಅಕ್ರಮ ವಹಿವಾಟು ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಗಳ ಲೆಕ್ಕ ಪತ್ರ ಮತ್ತು ನಗದು ವಹಿವಾಟಿನ ವಿವರ ಪರಿಶೀಲಿಸುತ್ತಿರುವನ್ನು ಐಟಿ ಅಧಿಕಾರಿಗಳ ತಂಡ ಪರಿಶೀಲಿಸುತ್ತಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿರುವ ಮೂರ್ನಾಲ್ಕು ಸಹಕಾರ ಸಂಘಗಳ ಮೇಲೆ ದಾಳಿ ಆಗಿದೆ. ಸ್ಥಳದಲ್ಲಿ ಚುನಾವಣಾಧಿಕಾರಿ, ತೀರ್ಥಹಳ್ಳಿ ಡಿವೈಎಸ್ಪಿ, ತಹಶೀಲ್ದಾರ್ ಕೂಡ ಇದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭವಾದ ಕಾರಣ ಹಣಕಾಸಿನ ವಹಿವಾಟಿನ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಹಣದ ಅಕ್ರಮ ವಹಿವಾಟು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.