ಹೊಳೆಹೊನ್ನೂರು: ಭದ್ರಾವತಿಯಿಂದ ರಾಣೇಬೆನ್ನೂರಿಗೆ ಸುಮಾರು 3000 ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಇಂದು ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಕ್ರಾಸ್ ಬಳಿ ಪಲ್ಟಿಯಾಗಿದ ಘಟನೆ ನಡೆದಿದೆ.
ರಾಣೇಬೆನ್ನೂರಿನ ಮಂಜುನಾಥ್ ಎಂಬುವವರಿಗೆ ಡೆಲಿವರಿ ಕೊಡಲು ಸುಮಾರು 3000 ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ದೇವಸ್ಥಾನದ ಕ್ರಾಸ್ ಬಳಿ ಲಾರಿ ಪಲ್ಟಿಯಾಗಿದೇ ಮುಂದೆ ಇರುವ ಅಪಾಯಕಾರಿ ತಿರುವನ್ನು ಚಾಲಕ ಗಮನಿಸದೆ ಮುಂದೆ ಬಂದ ವಾಹನ ತಪ್ಪಿಸಲು ಹೋಗಿ ಕೋಳಿ ತುಂಬಿದ ಲಾರಿ ರಸ್ತೆ ಪಕ್ಕದ ಅಡಿಕೆ ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ ಪರಿಣಾಮ ಲಾರಿಯ ಕ್ಲೀನರ್ ಆಶ್ರಪ್ 32 (ವರ್ಷ) ಗಂಭೀರ ಗಾಯಗೊಂಡಿದ್ದು ಆತನನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
7 ಲಕ್ಷ ನಷ್ಟ: ಲಾರಿಯಲ್ಲಿದ್ದ 3000 ಕೋಳಿಗಳಲ್ಲಿ ಸುಮಾರು 2000 ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಅಂದಾಜು 7 ಲಕ್ಷ ನಷ್ಟ ಸಂಭವಿಸಿದೆ ಎಂದು ಕೋಳಿಗಳ ಖರೀದಿದಾರರಾದ ರಾಣೇಬೆನ್ನೂರಿನ ಮಂಜುನಾಥ್ ಹೇಳಿದ್ದಾರೆ.
ಕೋಳಿಗಾಗಿ ಮುಗಿಬಿದ್ದ ಜನ:
ಮುಂಜಾನೆ ಅಪಘಾತ ಸಂಭವಿಸಿದ ಪರಿಣಾಮ ಸಾವಿರಾರು ಕೋಳಿಗಳು ಸತ್ತು ಬಿದ್ದಿದ್ದು ಅದೇ ಸಮಯಕ್ಕೆ ಕೆಲಸಕ್ಕೆ ಹೊರಟಿದ್ದ ಸ್ಥಳೀಯರು ಕೋಳಿಗಳನ್ನು ಕೊಂಡೊಯ್ಯಲು ಮುಗಿಬಿದ್ದಿದ್ದಾರೆ ಅಲ್ಲದೆ ವಿಚಾರ ಸುತ್ತಮುತ್ತಲ ಜನರಿಗೆ ಗೊತ್ತಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ನಾ ಮುಂದು ತಾ ಮುಂದು ಎಂದು ಕೈಗೆ ಸಿಕ್ಕ ಕೋಳಿಗಳನ್ನು ಚೀಲಕ್ಕೆ ತುಂಬಿಸಿಕೊಂಡು ತೆರಳಿದರು.
ಅಪಾಯಕಾರಿ ತಿರುವು:
ಈ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು, ಕೇವಲ ಒಂದು ವಾರದ ಹಿಂದೆ ಇದೇ ಸ್ಥಳದಲ್ಲಿ ಇದೇ ರೀತಿ ಗೂಡ್ಸ್ ವಾಹನ ಪಲ್ಟಿಯಾಗಿ ಬಿದ್ದಿದ್ದು ಘಟನೆಯಲ್ಲಿ ವಾಹನದಲ್ಲಿದ್ದ ವ್ಯಕ್ತಿಗಳು ಗಾಯಗೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
