ಹೊಳೆಹೊನ್ನೂರು: ಮೃತ ಯಜಮಾನನನ್ನು ಹುಡುಕಿಕೊಂಡು ಆಸ್ಪತ್ರೆ ಆವರಣದಲ್ಲಿ ಠಿಕಾಣಿ ಹೂಡಿದ ನಾಯಿಯೊಂದನ್ನು ಹಿಡಿಯಲಾಗಿದೆ.
ಕನ್ನೆಕೊಪ್ಪದ ಪಾಲಾಕ್ಷಪ್ಪ ಹದಿನೈದು ದಿನಗಳ ಹಿಂದೆ ಎದೆನೋವಿನಿಂದ ಬಳಲಿ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಘಾತವನ್ನು ದೃಡಪಡಿಸಿದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿದ್ದಾರೆ. ಚಿಕಿತ್ಸೆ ಪಲಿಸದೆ ಮೆಗ್ಗಾನ್‌ನಲ್ಲಿ ಪಾಲಾಕ್ಷಪ್ಪ ಮೃತಪಟ್ಟಿದ್ದಾರೆ.
ಆದರೆ ಎದೆನೋವಿನಿಂದ ಬಳಲುತ್ತಿದ ವ್ಯಕ್ತಿಯೊಂದಿಗೆ ಬಂದಿದ ನಾಯಿ ತನ್ನ ಮಾಲೀಕ ಪಾಲಾಕ್ಷಪ್ಪ ಆಸ್ಪತ್ರೆಯಲ್ಲೆ ಉಳಿದಿದ್ದಾರೆಂದು ತಿಳಿದು ಆಸ್ಪತ್ರೆಯ ಆವರಣದಲ್ಲೆ ಠಿಕಾಣಿ ಹೂಡಿತ್ತು. ಆಸ್ಪತ್ರೆ ಒಳಗೆ ಹೋಗಿ ಕೋಣೆಗಳನ್ನು ಸುತ್ತಿ ಮಾಲೀಕನಿಗಾಗಿ ಹುಡುಕಾಟ ನಡೆಸಿದೆ. ಹೃದಯಘಾತದಿಂದ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿಯೊಬ್ಬರು ನಾಯಿಯನ್ನು ಗುರುತಿಸಿದ್ದು, ಮೃತ ವ್ಯಕ್ತಿಯ ಕುಟುಂಬಸ್ಥರೊಂದಿಗೆ ಇದೆ ನಾಯಿ ಬಂದಿದ್ದಾಗಿ ಹೇಳಿದ್ದಾರೆ.
ದಿನ ಕಳೆದಂತೆ ಆಸ್ಪತ್ರೆ ಆವರಣದಲ್ಲಿ ನಾಯಿ ಉಪಟಳ ಹೆಚ್ಚಾಗಿದೆ. ನಾಯಿಯು ಆಸ್ಪತ್ರೆಯ ಒಳಗೆ ಬಂದಾಗ ಯಾರಾದರೂ ಓಡಿಸಿದರೆ ಜೋರಾಗಿ ಬೊಗಳುವುದಕ್ಕೆ ಶುರು ಮಾಡಿತ್ತು. ಜೊತೆಗೆ ಮಾಲೀಕನ ಹುಡುಕಾಡಿ ರೋಸಿ ಹೋದ ನಾಯಿ, ತನ್ನನ್ನು ಓಡಿಸಿದವರ ಮೇಲೆರಗಲು ಶುರುಮಾಡಿತ್ತು.
ಮುಂಜಾಗೃತ ಕ್ರಮವಾಗಿ ಡಾ.ದೇವಾನಂದ್ ಆಸ್ಪತ್ರೆ ಆವರಣದಿಂದ ಜಾಗ ಬಿಟ್ಟು ಹೋಗದ ನಾಯಿಯನ್ನು ಹಿಡಿದುಕೊಂಡು ಹೋಗುವಂತೆ ಪ,ಪಂ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪ.ಪಂ ಮುಖ್ಯಾಧಿಕಾರಿ ಮಂಜುನಾಥ್ ಪಶು ಆಸ್ಪತ್ರೆ ವೈದ್ಯರ ಸಹಕಾರ ಕೇಳಿದ್ದಾರೆ. ಪ.ಪಂ ಕೆಲ ಸಿಬ್ಬಂದಿಗಳು ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಪ.ಪಂ ತ್ಯಾಜ್ಯ ವಿಲೇವಾರಿ ಘಟಕದ ಜಾಗದಲ್ಲಿ ಬಿಟ್ಟು ಬಂದಿದ್ದಾರೆ ಎನ್ನಲಾಗುತ್ತಿದೆ.