Trending

“ಬಿ.ಹೀರಾನಾಯ್ಕ ಬಂಜಾರ ಸಮಾಜದ ರತ್ನ”- ಅಭಿನಂದನೆ

Spread the love
ಭಾರತೀಯ ಸಮಾಜದಲ್ಲಿ ಅಸಂಘಟಿರಾಗಿ, ಅನಾಥರಂತೆ ಬದುಕುತ್ತಿರುವ ಬಂಜಾರ ಸಮುದಾಯದಲ್ಲಿ ನಿಜವಾದ ಸಮಾಜ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಗೌರವಿಸಿ, ಅಭಿನಂದಿಸುವ ಮನಸ್ಸುಗಳಿಗೆ ಮೊದಲು ಅಭಿನಂದಿಸುತ್ತೇನೆ.
ಬಿ.ಹೀರಾನಾಯ್ಕ ಅಭಿನಂದನಾ ಸಮಿತಿಯವರು ಹೀರಾನಾಯ್ಕರವರ ಸಮಾಜ ಸೇವೆಯನ್ನು ಗುರುತಿಸಿ ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿ, ಅವರಿಗೆ *’ಬಂಜಾರ ಸಮಾಜದ ರತ್ನ’* ಎಂಬ ಅಭಿನಂದನ ಗ್ರಂಥ ನೀಡಿರುವುದು ಸಮಾಜಮುಖಿ ಚಿಂತನೆಯಲ್ಲಿ ತೊಡಗಿರುವ ಅದೆಷ್ಟೋ ಮನಸ್ಸುಗಳಿಗೆ ಸಂತೋಷ ಹಾಗೂ ಹೆಮ್ಮೆ ಪಡುವಂತಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ. ಎಂ.ದೊಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು,ನಂತರ ಭದ್ರಾವತಿಯ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ತಹಸೀಲ್ದಾರರಾಗಿ ಸಾರ್ವಜನಿಕ ರಂಗಕ್ಕೆ ಪಾದಾರ್ಪಣೆ ಮಾಡಿದ ಬಿ.ಹೀರಾನಾಯ್ಕರವರು ನಂತರ ಕೆಲವು ಪ್ರಭಾವಿ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಅವರ ಪರಿಚಯ ನನಗಿರಲಿಲ್ಲ. ರಾಜ್ಯದಲ್ಲಿ ಒಳ ಮೀಸಲಾತಿಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುವಾಗ ಅವರ ಪರಿಚಯವಾಯಿತು. ಆ ಸಂದರ್ಭದಲ್ಲಿ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರೂ ಗತ್ತು- ಗೈರತ್ತು ತೋರಿಸದೆ ಸಭೆಗಳಲ್ಲಿ ಭಾಗವಹಿಸಿ, ತುಂಬಾ ಸೌಜನ್ಯವಾಗಿ ಹೋರಾಟದ ರೂಪುರೇಷದ ಸಲಹೆ ನೀಡುತ್ತಿದ್ದರು. ಈ ಸರಳತೆ ನಮಗೆಲ್ಲರಿಗೂ ಇಷ್ಟವಾಗಿ ಹೋಯಿತು.
ಬಂಜಾರರ ಪೂಜನೀಯ ಸ್ಥಳ ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ್ ರವರ ಜಯಂತ್ಯೋತ್ಸವ ನಡೆಸುವ ಅವಕಾಶ ನನಗೆ ಒದಗಿ ಬಂದಿತು. ಡಾ. ಸಣ್ಣರಾಮರವರ ನೇತೃತ್ವದಲ್ಲಿ ಸ್ಥಳೀಯ ಮುಖಂಡರುಗಳ ಸಹಕಾರದಿಂದ 3 ವರ್ಷಗಳ ಕಾಲ ಜಾತ್ರಾ ಮಹೋತ್ಸವ ಅದ್ದೂರಿ ಹಾಗೂ ವ್ಯವಸ್ಥಿತವಾಗಿ ನಡೆಸಲಾಯಿತು. ಈ ಜಾತ್ರಾ ಮಹೋತ್ಸವದಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಸೇರಿದಂತೆ ಮಂತ್ರಿಗಳು, ಸಂಸದರು, ಶಾಸಕರುಗಳು ಭಾಗವಹಿಸಿ ಜಾತ್ರೆಗೆ ಮೆರಗು ನೀಡಿದ್ದರು. ಬಹುಶಃ ಜಾತ್ರಾ ಮಹೋತ್ಸವದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಕೆಯ ಹುಂಡಿ ಹಣವನ್ನು ಸಂಘದ ಖಾತೆಗೆ ಜಮಾ ಮಾಡಿಸಿದ್ದು, ಆ ಹಣದಲ್ಲಿ ಪುಣ್ಯಕ್ಷೇತ್ರಕ್ಕೆ ಜಮೀನು ಖರೀದಿಸಿದ್ದು ನಮ್ಮ ತಂಡದ ಹೆಗ್ಗಳಿಕೆಯಾಗಿತ್ತು. ಆ ಹೊತ್ತಿಗಾಗಲೇ ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಿತ್ತು, ಸಿದ್ದರಾಮಯ್ಯನವರ ಆಪ್ತ ಕಾರ್ಯದರ್ಶಿಯಾಗಿ ಬಿ.ಹೀರಾನಾಯ್ಕ ನೇಮಕಗೊಂಡಿದ್ದರು,ಸಮಾಜಮುಖಿ ಚಿಂತಕರಾಗಿದ್ದ ಅವರು ಸೂರಗೊಂಡನಕೊಪ್ಪದ *ಸಂತ ಸೇವಾಲಾಲ್ ಮಹಾಮಠವನ್ನು ಬಂಜಾರರ ಶಕ್ತಿ ಕೇಂದ್ರವಾಗಿಸಬೇಕು ಹಾಗೂ ಸಾರ್ವಜನಿಕ ಪ್ರವಾಸ ಕೇಂದ್ರವಾಗಿ ಮಾರ್ಪಡಿಸುವ* ನೀಲ ನಕ್ಷೆಯೊಂದಿಗೆ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ನಂತರ ಡಾ. ಸಣ್ಣರಾಮ ನೇತೃತ್ವದ ನಮ್ಮ ತಂಡ ಅಲ್ಲಿಂದ ನಿರ್ಗಮಿಸಿತು.
ಬಿ. ಹೀರಾನಾಯ್ಕ ನೇತೃತ್ವದಲ್ಲಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ ತಂಡ 3-4ವರ್ಷಗಳಲ್ಲಿಯೇ ಇಡೀ ಸೂರಗೊಂಡನ ಕೊಪ್ಪದ ಚಿತ್ರಣವೇ ಬದಲಾಯಿಸಿತು.ಸರ್ಕಾರ ಅಥವಾ ಅಧಿಕಾರಿಗಳು ಬದಲಾವಣೆಯಾದರೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಬಾರದೆಂಬ ಮುಂದಾಲೋಚನೆಯಲ್ಲಿ *’ಶ್ರೀ* *ಸೇವಾಭಾಯ ಪ್ರತಿಷ್ಠಾನ’* ಜಾರಿಗೆ ತರಲಾಯಿತು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿದ್ದುಕೊಂಡು ತಾಂಡಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡ ನಂತರ ಬಂಜಾರರು ವಲಸೆ ಹೋಗುವುದನ್ನು ತಡೆಯಲು ತಾಂಡಾಭಿವೃದ್ಧಿ ನಿಗಮದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದರು.
ತಮ್ಮ ಸೇವಾವಧಿಯಲ್ಲಿ ಪಡೆದ ಅನುಭವದ ಬುತ್ತಿಯನ್ನು ಸಮಾಜದಲ್ಲಿ ಬಿಚ್ಚಿಟ್ಟಿದ್ದ ಬಿ.ಹೀರಾನಾಯ್ಕ ಅವರು ಉತ್ತರ ಕರ್ನಾಟಕದಲ್ಲಿ ವಾಸಿಸುತ್ತಿರುವ ಬಹುತೇಕ ಬಂಜಾರರು ಗೋವಾ, ಮಹಾರಾಷ್ಟ್ರ, ತಮಿಳುನಾಡು, ಮಲೆನಾಡು ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಡೆಯಲು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಲಾಲ್ದರಿಯಲ್ಲಿ 34 ಎಕರೆ ಜಮೀನಿನನ್ನು ತಾಂಡಾಭಿವೃದ್ಧಿ ನಿಗಮದಿಂದ ಖರೀದಿಸಿ, ಆ ಜಾಗದಲ್ಲಿ ಬಂಜಾರರ ಉಡುಗೆ -ತೊಡುಗೆಗಳ ತಯಾರಿಕಾ ಘಟಕ ಸ್ಥಾಪಿಸಿ, ಆ ಭಾಗದ ವಲಸೆ ತಡೆಯುವ ಕೆಲಸಕ್ಕೆ ಕೈ ಹಾಕಿದ್ದರು.
ಕೊಪ್ಪಳ ಜಿಲ್ಲೆಯ ಗದಗಿ ಬಹದ್ದೂರ್ ಬಂಡ ಕೂಪಳಗಡದಲ್ಲಿ 15 ಎಕರೆ ಜಮೀನು ಖರೀದಿಸಿ, ಅಲ್ಲಿ ಬಂಜಾರ ಭಾಷೆ ಅಭಿವೃದ್ಧಿ ಮತ್ತು ಅದರ ಪರಂಪರೆ ಬಿಂಬಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿತ್ತು, ಬಾಗಲಕೋಟೆ ಜಿಲ್ಲೆ, ಗದ್ದನಕೇರಿಯಲ್ಲಿ 4 ಎಕರೆ ಜಮೀನು ಖರೀದಿಸಿ, ಅಲ್ಲಿ ಬಂಜಾರರ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ತರಬೇತಿ ಕೇಂದ್ರಗಳು ನಡೆಸುವ ಉದ್ದೇಶ ಹೊಂದಲಾಗಿತ್ತು. ಅಲ್ಲದೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಟ್ಟಿ ದೊಡ್ಡಣ್ಣಿಗೆರೆ ಶ್ರೀ ಭೀಮಾಸತಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ 10 ಎಕರೆ ಜಮೀನು ಖರೀದಿಗೆ ಕೆ ಐ ಎ ಡಿ ಬಿ ಅವರೊಂದಿಗೆ ಮಾತುಕತೆ ನಡೆಸಲಾಗಿತ್ತು. ಇಲ್ಲಿ ಬಂಜಾರ ಮಹಿಳಾ ಸಬಲೀಕರಣ ಯೋಜನೆ ರೂಪಿಸಲು ಉದ್ದೇಶ ಹೊಂದಲಾಗಿತ್ತು.
ನಮ್ಮಸಮಾಜದ ಕೆಲವು ಮುಖಂಡರುಗಳೇ ಅಪಸ್ವರಗಳು ಎತ್ತಿದ್ದರಿಂದ ಈ ಕೆಲಸ ಸಹಿತಗೊಂಡಿತು. ಪ್ರಸ್ತುತ 1.20 ಎಕರೆ ಜಾಗದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದೆ, ದುರಂತವೆಂದರೆ ಬಂಜಾರರ ಅಭಿವೃದ್ಧಿಗೆ ಪೂರಕ ಯೋಜನೆಗಳು ಸಾಕಾರಗೊಳ್ಳುವ ಹಂತದಲ್ಲಿಯೇ ಸರ್ಕಾರ ಹಾಗೂ ತಾಂಡಾಭಿವೃದ್ಧಿ ನಿಗಮದಲ್ಲಾದ ಕೆಲವು ಬದಲಾವಣೆಗಳು ಈ ಯೋಜನೆಗಳ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ, ಈ ಕೆಲಸ ಪೂರ್ಣಗೊಳಿಸುವ ಇಚ್ಚಾಶಕ್ತಿ ಹೊಂದಿರುವ ಅಧ್ಯಕ್ಷರು ಹಾಗೂ ಎಂ.ಡಿ ಸದ್ಯಕ್ಕೆ ಕಾಣುತ್ತಿಲ್ಲ
ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಬಿ. ಹೀರಾನಾಯ್ಕರವರು ಕೇವಲ ಅಭಿವೃದ್ಧಿ ಕೆಲಸಗಳು ಮಾತ್ರವಲ್ಲ, ಒಳ ಮೀಸಲಾತಿ ಹೋರಾಟದ ರೂಪಕರಾಗಿ ತೆರೆಮರೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ, ಅವರ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳಿಂದ ಬಹಳಷ್ಟು ವಿರೋಧಗಳು, ಟೀಕೆಗಳು, ಅವಮಾನಗಳು ಅನುಭವಿಸಿದ್ದಾರೆ, ಈ ವಿಚಾರಗಳ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ‘ *ಹೋಗ್ಲಿ ಬಿಡಿ ಅವ್ರೆಲ್ಲ ನಮ್ಮವರಲ್ವಾ ಇಂದಲ್ಲ ನಾಳೆ ಸರಿಯಾಗುತ್ತಾರೆ’ ಎಂದು ತಾಯ್ತಾನದ ನಗು ಮುಖದ ಮಾತು* ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಸೇವೆ ಮತ್ತು ವಯಸ್ಸಿನಲ್ಲಿ ಹಿರಿತನವಿದ್ದರೂ *ಜನಪ್ರತಿನಿಧಿಗಳಿಗೆ, ಮುಖಂಡರುಗಳಿಗೆ ಹಾಗೂ ಅಧಿಕಾರಿಗಳಿಗೆ* *ಸಾಹೇಬ್ರೆ* *ಎಂದು ಸಂಭೋಧಿಸುವ* *ಗುಣ ಯಾರಿಗೂ ಇಷ್ಟವಾಗುವುದಿಲ್ಲ* , ಬಹುಶಃ ಈ ಪ್ರವೃತ್ತಿ ಅವರಿಗೆ ಸರ್ಕಾರಿ ಸೇವಾ ಅವಧಿಯಲ್ಲಿ ಬಂದಿರಬಹುದು.
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬ ಮಾತಿನಂತೆ ಬಿ. ಹೀರಾನಾಯ್ಕರು ಅಧಿಕಾರದಲ್ಲಿದ್ದಾಗ ಹೊಗಳುವುದು, ಗೌರವಿಸುವುದು, ಭಟ್ಟಂಗಿತನ ಮಾಡುವುದು ವಾಡಿಕೆ, ಆದರೆ ಅಧಿಕಾರವಿಲ್ಲದಿದ್ದಾಗ ಅಭಿಮಾನದಿಂದ ಗೌರವಿಸುವುದು ಅವರ ವ್ಯಕ್ತಿತ್ವಕ್ಕೆ ಸಲ್ಲುವ ಗೌರವವಾಗಿದೆ. ಧಾರವಾಡದ ಗೆಳೆಯರು ಯಾವುದೇ ಸದ್ದು, ಗದ್ದಲ ಇಲ್ಲದೆ, ಪ್ರಚಾರದ ಗೀಳಿಲ್ಲದೆ ಈ ಕೆಲಸ ಮಾಡಿ ಮುಗಿಸಿದ್ದಾರೆ, ಅವರಿಗೆ ನನ್ನ ಅಭಿನಂದನೆಗಳು
*ಗಂಗಾನಾಯ್ಕಗೊಂದಿ
*ಹಿರಿಯಪತ್ರಕರ್ತರು
[pj-news-ticker]