ಶಿವಮೊಗ್ಗ: ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಗಣತಿ ಯಶಸ್ವಿಯಾಗಿ ನಡೆಯುತ್ತಿದ್ದು, ಶೇ.80ರಷ್ಟು ಗಣತಿ ಮುಗಿದಿದೆ. ಉಳಿದ ಶೇ.20ರಷ್ಟಕ್ಕೆ ಜನರನ್ನು ತಲುಪುವುದು ಸವಾಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಈ ಕುರಿತು ಇಂದು ಮಾತನಾಡಿರುವ ಅವರು, ಜಿಲ್ಲೆಯಲ್ಲಿ 4,85,446 ಕುಟುಂಬಗಳಿವೆ. 3,86,248 ಮನೆಗಳ ಗಣತಿ ಮುಕ್ತಾಯವಾಗಿದೆ. ಈಗಾಗಲೇ ಸೊರಬ ತಾಲೂಕಿನಲ್ಲಿ ಗಣತಿ ಕಾರ್ಯ ಮುಕ್ತಾಯವಾಗಿದ್ದು, ಗಣತಿಯನ್ನು ಶೇ.100ರಷ್ಟು ಮುಕ್ತಾಯ ಮಾಡಿದ ಗಣತಿದಾರರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ನೆಟ್ವರ್ಕ್ ಇರುವೆಡೆ ಗಣತಿಗೆ ಸಹಕರಿಸಲು ಮನವಿ: ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ 30 ಸಾವಿರ ಮನೆಗಳನ್ನು ತಲುಪಲು ಆಗುತ್ತಿಲ್ಲ. ಕೆಲ ಮನೆಗಳಲ್ಲಿ ನೆಟ್ವರ್ಕ್ ಸಿಕ್ಕರೂ ಸಹ ಓಟಿಪಿ ಸಮಸ್ಯೆಯಾಗಿದೆ. ಇದರಿಂದ ಈ ಭಾಗದಲ್ಲಿ ಕ್ಯಾಂಪ್ ಮಾಡಿದ್ದು, ಅಲ್ಲಿನ ಜನರು ಗಣತಿಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು.
ನಮ್ಮ ಗಣತಿದಾರರು ಮನೆಗೆ ಹೋದಾಗ ಅವರಿಗೆ ನೆಟ್ ವರ್ಕ್ ಸಿಗದೆ ಹೋಗಬಹುದು. ಇದರಿಂದ ಅಂತಹ ಪ್ರದೇಶಗಳಲ್ಲಿ ತಕ್ಷಣ ನೆಟ್ವರ್ಕ್ ನೀಡಲು ತಹಶೀಲ್ದಾರ್ಗೂ ಆಗುವುದಿಲ್ಲ. ಈ ಸಮಸ್ಯೆ ತಕ್ಷಣಕ್ಕೆ ಪರಿಹರಿಸುವಂಥದ್ದಲ್ಲ. ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ 120 ಮೊಬೈಲ್ ಟವರ್ ಹಾಕಲಾಗಿದೆ. ಈಗ ಇನ್ನೂ 110 ಟವರ್ ಬರುತ್ತಿದೆ ಎಂದು ತಿಳಿಸಿದರು.
ಹೈಕೋರ್ಟ್ ಆದೇಶದಂತೆ ನಾವು ಯಾರಲ್ಲೂ ಸಹ ಒತ್ತಾಯವಾಗಿ ಗಣತಿ ಮಾಹಿತಿ ಕೇಳುತ್ತಿಲ್ಲ. ಕೆಲವು ಕಡೆ ವಾಣಿಜ್ಯ ಉದ್ದೇಶದ ಮೀಟರ್ಗಳಿಗೂ ಸಹ ಯುಹೆಚ್ಡಿಐ ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವು ಕಡೆ ಮನೆ ಬಿಟ್ಟು ಬೇರೆ ಕಡೆಯಲ್ಲಿ ಆ ಮನೆಯವರು ಗಣತಿಯಲ್ಲಿ ಭಾಗವಹಿಸಿದ್ದಾರೆ. ದೇವಾಲಯಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇವುಗಳನ್ನು ಗಣತಿಯಿಂದ ಕೈಬಿಡಬೇಕಾಗುತ್ತದೆ. ಜಿಯೋಟ್ಯಾಗ್ ಮೂಲಕ ಮುಕ್ತಾಯ ಮಾಡುತ್ತಿದ್ದು, ಜಿಲ್ಲೆಯಲ್ಲಿ ಇವುಗಳ ಸಂಖ್ಯೆ ಶೇ.5ರಷ್ಟು ಇರಬಹುದು ಎಂದರು.
