ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರಕಾರ ನೌಕರರಿಗೆ ಭರ್ಜರಿ ಗಿಫ್ಟ್ ಎಂಬಂತೆ ಗುರುವಾರ ತುಟ್ಟಿಭತ್ಯೆ (ಡಿಎ)ಯನ್ನು ಮೂಲ ವೇತನದ ಶೇಕಡಾ 50 ಕ್ಕೆ ಏರಿಸಿದ್ದು, ಈ ವರ್ಷದ ಜನವರಿ 1 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಇರುವ ಶೇಕಡಾ 46 ರ ದರದಿಂದ 1 ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
ಮೂಲ ವೇತನ/ಪಿಂಚಣಿ, ಬೆಲೆ ಏರಿಕೆ ವಿರುದ್ಧ ಸರಿದೂಗಿಸುವ ಸಲುವಾಗಿ ಜನವರಿ 1, 2024 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಆರ್‌ನೆಸ್ ರಿಲೀಫ್ (ಡಿಆರ್) ಅನ್ನು ಬಿಡುಗಡೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಸ್ತುತ ಇರುವ ಶೇಕಡಾ 46 ರ ದರಕ್ಕಿಂತ 4 ಶೇಕಡಾ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಪುಟ ಸಭೆಯ ನಂತರ ಹೇಳಿದ್ದಾರೆ.
Dearness Allowance ಮತ್ತು Dearness Relief ಎರಡರ ಲೆಕ್ಕದಲ್ಲಿ ಬೊಕ್ಕಸಕ್ಕೆ ವಾರ್ಷಿಕ 12,869 ಕೋಟಿ ರೂ. ಹೊರೆ ಇದ್ದು ಇನ್ನು ಮುಂದೆ ಹೆಚ್ಚಳದ ಪರಿಣಾಮ 2024-25ರ ಅವಧಿಯಲ್ಲಿ (ಜನವರಿ 2024 ರಿಂದ ಫೆಬ್ರವರಿ 2025) 15,014 ಕೋಟಿ ರೂ.ಹೊರೆಯಾಗಲಿದೆ.ಡಿಎ ಹೆಚ್ಚಳದೊಂದಿಗೆ ಸಾರಿಗೆ ಭತ್ಯೆ, ಕ್ಯಾಂಟೀನ್ ಭತ್ಯೆ ಮತ್ತು ನಿಯೋಜಿತ ಭತ್ಯೆಗಳನ್ನು ಶೇ 25 ರಷ್ಟು ಹೆಚ್ಚಿಸಲಾಗಿದೆ. ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ.27, ಶೇ.19 ಮತ್ತು ಶೇ.9ರಿಂದ ಕ್ರಮವಾಗಿ ಶೇ.30, ಶೇ.20 ಮತ್ತು ಶೇ.10ಕ್ಕೆ ಏರಿಸಲಾಗಿದೆ.
ಗ್ರಾಚ್ಯುಟಿ ಅಡಿಯಲ್ಲಿ ಪ್ರಯೋಜನಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ ಮತ್ತು ಈಗಿರುವ 20 ಲಕ್ಷದಿಂದ 25 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ವಿವಿಧ ಭತ್ಯೆಗಳ ಹೆಚ್ಚಳದಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ 9,400 ಕೋಟಿ ರೂ.ಹೊರೆಯಾಗಲಿದೆ.
7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಡಿಎ ಮತ್ತು ಡಿಆರ್ ಹೆಚ್ಚಳವಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರವು 67.95 ಲಕ್ಷ ಪಿಂಚಣಿದಾರರು ಜತೆಗೆ 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನವನ್ನು ಪಡೆಯಲಿದ್ದಾರೆ.