ತಮಿಳಿನ ಜನಪ್ರಿಯ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ ಅಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಎದುರಾದ ಆರೋಗ್ಯ ಸಮಸ್ಯೆ ಏನೆಂಬುದರ ಬಗ್ಗೆ ಇನ್ನಷ್ಟೆ ಖಚಿತ ಮಾಹಿತಿ ತಿಳಿಯಬೇಕಿದೆ.
ಅಜಿತ್ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಖಚಿತಪಡಿಸಿವೆ. ಆದರೆ ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಕೆಲವು ಅಭಿಮಾನಿ ಪೇಜ್ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಅಜಿತ್ ಅವರು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.
ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದು ನಿಜ ಆದರೆ ಈ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಿಬಿಡುವುದು ಬೇಡ, ಆಸ್ಪತ್ರೆಯಿಂದಲೇ ಖಚಿತ ಮಾಹಿತಿ ಹೊರಬೀಳಲಿದೆ ಎಂದು ಅಜಿತ್ರ ಆಪ್ತರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ತಮಿಳಿನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಜಿತ್, ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ತಂದಿದೆ.
ಅಜಿತ್, ಕೆಲವು ದಿನಗಳ ಹಿಂದೆಯಷ್ಟೆ ಪತ್ನಿ ಹಾಗೂ ಕುಟುಂಬದ ಆಪ್ತರೊಡನೆ ತಮ್ಮ ಪುತ್ರನ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಅಜಿತ್, ತಮ್ಮ ವಾರಗೆಯ ಇತರೆ ನಟರಂತಲ್ಲದೆ ವೈಯಕ್ತಿಕ ಆರೋಗ್ಯ, ವೈಯಕ್ತಿಕ ಹವ್ಯಾಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೈಕರ್ ಸಹ ಆಗಿರುವ ಅಜಿತ್ ಕುಮಾರ್, ದೇಶ-ವಿದೇಶಗಳಲ್ಲಿ ಬೈಕಿಂಗ್ ಮಾಡಿದ್ದಾರೆ. ಶಿಸ್ತಿನ ಜೀವನ ಮಾಡುತ್ತಿರುವ ಅಜಿತ್ಗೆ ಹಠಾತ್ತನೆ ಏನಾಯ್ತು ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಅಜಿತ್ 1990ರಿಂದಲೂ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಜಯ್, ರಜನೀಕಾಂತ್, ಸೂರ್ಯ ರೀತಿಯಲ್ಲಿಯೇ ಭಾರಿ ದೊಡ್ಡ ಅಭಿಮಾನಿ ಬಳಗವನ್ನು ಅಜಿತ್ ಹೊಂದಿದ್ದಾರೆ. ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ಅಜಿತ್ ಕುಮಾರ್ ನೀಡಿದ್ದಾರೆ. ಪ್ರಸ್ತುತ ಅವರು ವಿದಾ ಮುಯಾರ್ಚಿ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.