ಮಂಡ್ಯ : ನಾನು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನೀವು ಬೇರೆ ಯಾವುದೆ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ಸ್ವತಃ ಪ್ರಧಾನಿ ಮೋದಿಯವರು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್ಎಸ್ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು.