ಬೆಂಗಳೂರು: ”ನನ್ನನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಹಿಂದೆ ಷಡ್ಯಂತ್ರ, ಪಿತೂರಿ ಇದೆ. ಕಾಲ ಬಂದಾಗ ಯಾರು, ಏನು ಎನ್ನುವುದನ್ನು ಹೇಳುತ್ತೇನೆ” ಎಂದು ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
”ಹೈಕಮಾಂಡ್ ಗೆ ಮುಜುಗರ ಮಾಡಲು ನಾನು ಬಯಸುವುದಿಲ್ಲ. ಪಕ್ಷದ ವಿರುದ್ಧ ಈಗ ಹೇಳಿಕೆ ನೀಡುವುದು ಸಾಧುವಲ್ಲ. ನಾನು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ” ಎಂದು ಹೇಳಿದರು.
ಪಕ್ಷದ ನಾಯಕರಾದ ರಾಹುಲ್ ಗಾಂಧಿ, ವೇಣುಗೋಪಾಲ್ ಅವರಿಗೆ ನನ್ನ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡಿದ್ದೆ. ಆದರೆ ರಾಜ್ಯಪಾಲರ ಕಚೇರಿಯಿಂದ ಕೈಬಿಡಲಾಗಿದೆ ಎಂದು ಪತ್ರ ಬಂದಿದೆ. ಮಾಜಿ ಸಚಿವನಾಗಿ ಬಹಳ ಸಂತೋಷವಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು’ನಾವೆಲ್ಲರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು’ ಎಂದಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ “ನನಗೆ ಈ ಬಗ್ಗೆ ತಿಳಿದಿಲ್ಲ.ನಮ್ಮ ಪಕ್ಷವು ಎಲ್ಲವನ್ನೂ ನೋಡುತ್ತದೆ. ಯಾವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದಿದ್ದಾರೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ರಾಜ್ಯಪಾಲರು ರಾಜಣ್ಣ ಅವರನ್ನು ತತ್ ಕ್ಷಣ ಸಂಪುಟದಿಂದ ಕೈಬಿಡಲು ಸಹಿ ಹಾಕಿದ್ದಾರೆ ಎಂದು ಬರೆಯಲಾಗಿದೆ.
