Trending

ಜಗಳ ಬಿಡಿಸಲು ಬಂದ ಪೊಲೀಸರಿಗೇ ಚಾಕು ಇರಿತ : ಇಬ್ಬರು ಅರೆಸ್ಟ್

Spread the love

ಕಾರವಾರ(ಉತ್ತರ ಕನ್ನಡ): ರೌಡಿಗಳ ಜಗಳ ಬಿಡಿಸಲು ಹೋದ ಪೊಲೀಸರೇ ದಾಳಿಗೊಳಗಾದ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರದಲ್ಲಿ ರೌಡಿಶೀಟರ್ ರಾಜು ಮತ್ತು ಆತನ ಗ್ಯಾಂಗ್ ಮನೋಜ್ ಎಂಬ ಯುವಕನೊಂದಿಗೆ ತಡರಾತ್ರಿ ಜಗಳ ಮಾಡುತ್ತಿತ್ತು. ಗಲಾಟೆ ನೋಡಿದ ಸ್ಥಳೀಯರು ತಕ್ಷಣ ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಹವಾಲ್ದಾರ್ ಸಂಗಪ್ಪ ಮತ್ತು ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಕೋಪಗೊಂಡ ರೌಡಿಶೀಟರ್ ರಾಜು ಮತ್ತು ಆತನ ಸಹಚರರು ಪೊಲೀಸರ ಮೇಲೆಯೇ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹವಾಲ್ದಾರ್ ಸಂಗಪ್ಪ ಅವರ ಹೊಟ್ಟೆಗೆ ತೀವ್ರವಾಗಿ ಗಾಯವಾಗಿದೆ. ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಅವರಿಗೂ ಗಾಯವಾಗಿದೆ. ಮನೋಜ್ ಎಂಬಾತನಿಗೂ ಚಾಕು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ. ಹವಾಲ್ದಾರ್ ಸಂಗಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ರಾಜು, ರಿತೀಕ್, ಮದನ್ ನಾಯ್ಕ್, ಯೋಗೇಶ್ ಹಾಗು ದರ್ಶನ್ ಸೇರಿ ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಮುಖ ಆರೋಪಿ ರೌಡಿಶೀಟರ್ ರಾಜು ಮತ್ತು ಮನೋಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರೆಸಲಾಗಿದೆ.

ಮತ್ತೊಂದೆಡೆ, ಮುಂಡಗೋಡ ತಾಲೂಕಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಕಳೆದ ಗುರುವಾರ ಒಂದೇ ರಾತ್ರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳತನ ನಡೆದಿದೆ. ಸತತ ಕಳ್ಳತನಗಳಿಂದ ಜನರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸ್ ಗಸ್ತು ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿದೆ.

 

[pj-news-ticker]