Breaking
Tue. Jul 16th, 2024

ಬೆಚ್ಚಿಬಿದ್ದ ಹಾಸನ ಜನತೆ: ಓರ್ವನ ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ

By Mooka Nayaka News Jun 20, 2024
Spread the love

ಹಾಸನ: ಹಾಸನ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದ ಭೀಕರ ಫೈರಿಂಗ್ ನಲ್ಲಿ ಓರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ನಂತರ ಗುಂಡಿಕ್ಕಿದವ ತನ್ನನ್ನು ತಾನು ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಹಾಡಹಗಲೇ ಫೈರಿಂಗ್ ನಡೆದಿದ್ದು, ಸುತ್ತಮುತ್ತಲ ಜನರನ್ನು ಬೆಚ್ಚಿಬೀಳಿಸಿದೆ.

ಹಾಸನ ನಗರದ ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಹೊಯ್ಸಳ‌ನಗರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಒಬ್ಬರನ್ನು ಕಾರಿನಲ್ಲಿ ಹತ್ಯೆ ಮಾಡಲಾಗಿದ್ದು, ಕಾರಿನ ಬಳಿ ಮತ್ತೊಬ್ಬರ ಕೊಲೆಯಾಗಿದೆ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಎಫ್ಎಸ್ಎಲ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರ ಪಡೆಯಲಾಗುತ್ತಿದೆ.

ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

ಕಾರು ಮೈಸೂರು ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಗಳ ಮಾಹಿತಿ ತಿಳಿಯಬೇಕಿದೆ. ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಮಾಹಿತಿ ಇದೆ. ಆದರೆ, ವಾಸ್ತವ ಏನೆಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ತಿಳಿಸಿದರು.

 

 

Related Post