ಉತ್ತರ ಕನ್ನಡ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆಯ ಭೀತಿ ಹೆಚ್ಚುತ್ತಿದ್ದು, ಮಂಗನ ಕಾಯಿಲೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 65 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಉಂಟಾದ ಮೊದಲ ಸಾವಿನ ಪ್ರಕರಣ ಇದಾಗಿದ್ದು, ಪರಿಣಾಮಕಾರಿ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಆರೋಗ್ಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಸಮೀಪದ ಜಿಡ್ಡಿ ಗ್ರಾಮದ ಮಹಿಳೆಯ ಸ್ಥಿತಿ ಬುಧವಾರ ಗಂಭೀರವಾಗಿತ್ತು. ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿವೆ.
ಮಂಗನ ಕಾಯಿಲೆಯು ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ರಾಜ್ಯದ ಮೂರು ಜಿಲ್ಲೆಗಳ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.
ರಾಜ್ಯದಲ್ಲಿ ಈವರೆಗೆ 103 ಮಂದಿಯಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದರು.
ಪರಿಣಾಮಕಾರಿ ಲಸಿಕೆಗಾಗಿ ರಾಜ್ಯ ಸರ್ಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯೊಂದಿಗೆ ಮಾತುಕತೆ ನಡೆಸಿದೆ ಮತ್ತು ಅಧಿಕಾರಿಗಳು ಶೀಘ್ರವಾಗಿ ಲಸಿಕೆಯನ್ನು ಪಡೆಯುವ ಭರವಸೆಯಲ್ಲಿದ್ದಾರೆ. ರೋಗ ಪತ್ತೆಯಾದ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗುತ್ತಿದೆ.
ಇದ್ದಕ್ಕಿದ್ದಂತೆ ಶೀತ, ಜ್ವರ ಮತ್ತು ತಲೆನೋವು ಮಂಗನ ಕಾಯಿಲೆಯ ಲಕ್ಷಣವಾಗಿದ್ದು, ಆರಂಭಿಕ ರೋಗಲಕ್ಷಣದ ಪ್ರಾರಂಭದ ಮೂರು-ನಾಲ್ಕು ದಿನಗಳ ನಂತರ ವಾಂತಿಯೊಂದಿಗೆ ತೀವ್ರವಾದ ಸ್ನಾಯು ನೋವು, ಜಠರಗರುಳಿನ ಲಕ್ಷಣಗಳು ಮತ್ತು ರಕ್ತಸ್ರಾವದ ಸಮಸ್ಯೆಗಳು ಸಂಭವಿಸಬಹುದು.