ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಪಕ್ಷಗಳು ತಯಾರಿ ಆರಂಭಿಸಿವೆ. ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿ ಕಾರ್ಯಕರ್ತರು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಹಾಗೂ ಅಮಿತ್ ಶಾ ಅವರಿಗೆ ಪತ್ರ ಬರೆದ ಬಿಜೆಪಿ ಕಾರ್ಯಕರ್ತರು ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನದಲ್ಲಿ ನಾವು ರಾಷ್ಟ್ರೀಯ ನಾಯಕರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧರಿಸಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಎರಡು ಭಾರಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದು ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿಲ್ಲ. ಕ್ಷೇತ್ರವನ್ನ ಅಭಿವೃದ್ದಿ ಮಾಡಿಲ್ಲ. ಹೀಗಾಗಿ ಉತ್ತಮ ವ್ಯಕ್ತಿಗೆ ಟಿಕೆಟ್ ನೀಡಿ. ಹೊಸ ಮುಖಕ್ಕೆ ಟಿಕೆಟ್ ನೀಡಬೇಕು ಎಂದು 5 ಸಾವಿರಕ್ಕೂ ಹೆಚ್ಚು ಪತ್ರಗಳನ್ನ ಪೋಸ್ಟ್‌ನಲ್ಲಿ ಕಳುಹಿಸುವ ಮೂಲಕ ಕಾರ್ಯಕರ್ತರು ಮನವಿ ಮಾಡಿದ್ದಾರೆ ಎನ್ನಲಾಗಿದೆ.