Trending

ಭಾರತಕ್ಕೆ ಅರಿವಿನ ಕಣ್ಣುಗಳನ್ನು ಕೊಟ್ಟ ನಿಜ ನಾಯಕ ಅಂಬೇಡ್ಕರ್ : ಎನ್. ರವಿಕುಮಾರ್

Spread the love

ಭದ್ರಾವತಿ: ದೇಶದ ಜಾತಿವ್ಯವಸ್ಥೆಯಿಂದ ಘೋರ ಅವಮಾನ, ದೌರ್ಜನ್ಯಗಳನ್ನು ಅನುಭವಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾವು ಬರೆದ ಸಂವಿಧಾನದಲ್ಲಿ ಯಾವ ಜಾತಿಗಳ ವಿರುದ್ದವೂ ಕೇಡು, ಸೇಡು ಬಯಸದೆ ಎಲ್ಲಾ ಜಾತಿ,ಧರ್ಮ ವರ್ಗಗಳಿಗೂ ಸಮಾನ ನ್ಯಾಯವನ್ನು ಕಲ್ಪಿಸುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ ಎಂದು ಪತ್ರಕರ್ತ, ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ವಿಶ್ಲೇಷಿಸಿದರು.

ಇಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್ ನ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಅವಮಾನ, ನೋವು, ದೌರ್ಜನ್ಯಗಳನ್ನು ನುಂಗಿ ಈ ದೇಶದ ದಲಿತರ, ದಮನಿತರ ಪಾಲಿಗೆ ಬದುಕನ್ನು ರೂಪಿಸಿಕೊಟ್ಟವರು. ಜಾತೀಯತೆಯಿಂದ ಕುರುಡಾಗಿದ್ದ ಭಾರತಕ್ಕೆ ಅರಿವಿನ ಕಣ್ಣುಗಳನ್ನು ಕೊಟ್ಟ ನಿಜ ನಾಯಕ ಅಂಬೇಡ್ಕರ್ ಎಂದರು.

ಅಂಬೇಡ್ಕರ್ ಎನ್ನುವುದು ಶೋಕಿಯಾಗಿದೆ ಎಂದವರೇ ಇಂದು ಅಂಬೇಡ್ಕರ್ ಅವರನ್ನು ಎತ್ತಿಕೊಂಡು ಮೆರವಣಿಗೆ ಹೊರಟಿದ್ದಾರೆ. ಇದು ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕಿರುವ ತಾಕತ್ತು. ಅಂಬೇಡ್ಕರ್ ಎಂದಿಗೂ ಅಳಿಸಲಾಗದ ಮಹಾ ಪ್ರಭೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲವಾಗಿ ಶಿಕ್ಷಣ, ಉದ್ಯೋಗ, ನ್ಯಾಯ, ಹಕ್ಕುಗಳನ್ನು ಪಡೆದ ಜನಸಮುದಾಯಗಳೇ ಇಂದು ಅಂಬೇಡ್ಕರ್ ಅವರ ಸಿದ್ಧಾಂತ ವಿರೋಧಿಗಳ, ಜಾತಿವಾದಿಗಳ,ಕೋಮುವಾದಿಗಳ ಜೊತೆ ನಿಲ್ಲುತ್ತಿವೆ. ಮೀಸಲಾತಿ ಫಲಾನುಭವಿಗಳೇ ಮೀಸಲಾತಿ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಶವಿರ್ ಭಾಷಾ, ಸಂಶೋಧಕರಾದ ಹನುಮಂತಪ್ಪ, ಡಾ.ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ನ ನಿದೇಶಕರಾದ ಶ್ರೀಮತಿ ನೇತ್ರಾವತಿ ಸುಭಾಷ್, ಶ್ರೀಮತಿ ಸಾವಿತ್ರಿಗಣೇಶಪ್ಪ, ಪತ್ರಕರ್ತ ಶಿವಶಂಕರ್ ಉಪಸ್ಥಿತರಿದ್ದರು.

[pj-news-ticker]