ಜೈಪುರ: ಮಹಾ ಕುಂಭ ಮೇಳದ ಪುಣ್ಯ ಸ್ನಾನದಲ್ಲಿ ಭಾಗಿಯಾಗಬೇಕು ಎಂದು ತೆರಳುತ್ತಿದ್ದ ಯಾತ್ರಿಗಳಿದ್ದ ವಾಹನ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, 8 ಜನರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಬಿಲ್ವಾರ ಜಿಲ್ಲೆಯ ಮಂಡಲಗಢ ಮೂಲದ 8 ಮಂದಿ ಸ್ನೇಹಿತರು ಮಹಾಕುಂಭ ಮೇಳಕ್ಕೆ ಭಾಗಿಯಾಗಲು ಹೊರಟಾಗ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣಕ್ಕೆ ಸ್ಥಳೀಯರು ನೆರವಿಗೆ ಆಗಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವನ್ನಪ್ಪಿದವರ ಮೃತದೇಹಗಳನ್ನು ಶುಕ್ರವಾರ ಸ್ವಗ್ರಾಮಕ್ಕೆ ತಂದು ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು. ಊರಿನ ಯುವಕರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಗುರುವಾರ ದುದು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ದುದು ಎಡಿಎಂ ಗೋಪಾಲ್ ಪರಿಹಾರ್ ಮತ್ತು ನೈಬ್ ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಘಟನೆಯಲ್ಲಿ ಕಾರ್ಗೆ ಡಿಕ್ಕಿ ಹೊಡೆದ ಬಸ್ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ದುದು ಎಡಿಎಂ ಮೃತಪಟ್ಟವರಲ್ಲಿ 7 ಮಂದಿಯ ಗುರುತುಪತ್ತೆಯಾಗಿದೆ. ಇವರೆಲ್ಲಾ ಪ್ರಯಾಗರಾಜ್ ಮಹಾಕುಂಭಕ್ಕೆ ತೆರಳುತ್ತಿದ್ದರು. ಇವರ ಕಾರಿಗೆ ಎದುರಾಗಿ ಬಸ್ ಬರುತ್ತಿತ್ತು. ಬಸ್ ಟೈರ್ ಸ್ಪೋಟಗೊಂಡ ಪರಿಣಾಮ ಅದು ನಿಯಂತ್ರಣ ತಪ್ಪಿದ್ದರಿಂದ ಮತ್ತೊಂದು ಮಾರ್ಗಕ್ಕೆ ಬಂದಿದ್ದು. ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
