ಮಂಗಳೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಭರತ್ ಶೆಟ್ಟಿ ನೀಡಿದ್ದ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬುಧವಾರವೂ ವಾಗ್ದಾಳಿ ಮುಂದುವರೆಸಿದ್ದಾರೆ.
ಭಾನುವಾರ ಸುರತ್ಕಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಭರತ್ ಶೆಟ್ಟಿ, ರಾಹುಲ್ ಗಾಂಧಿ ಅವರನ್ನು ಸಂಸತ್ತಿನೊಳಗೆ ಬಂಧಿಸಿ ಕಪಾಳ ಮೋಕ್ಷ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಭರತ್ ಶೆಟ್ಟಿ ಸಂಸತ್ತಿನೊಳಗೆ ಹೇಗೆ ಬರುತ್ತಾರೆ. ರಾಹುಲ್ ಗಾಂಧಿ ಮೇಲೆ ದಾಳಿ ಮಾಡಲು ಅಸ್ತ್ರ ಹಿಡಿದು ಕೊಳ್ಳುತ್ತಾರೆಯೇ? ಅವರೇನು ಭಯೋತ್ಪಾದಕರೇ? ಎಂದು ಪ್ರಶ್ನಿಸಿದರು. ಭರತ್ ಶೆಟ್ಟಿಗೆ ರಾಹುಲ್ ಗಾಂಧಿ ಅಲ್ಲ, ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದರು.
ಬಿಜೆಪಿ ನಾಯಕರು ಮತ್ತು ಶಾಸಕರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕನನ್ನು ಅಪ್ರಬುದ್ಧ ಎಂದು ಉಲ್ಲೇಖಿಸಿರುವುದೇ ಮುಖ್ಯ ಕಾರಣವಾಗಿದೆ. ಈ ಪದವನ್ನು ತೆಗೆದುಹಾಕಬೇಕು ಎಂದು ಭಂಡಾರಿ ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ವರ್ತನೆಯಿಂದ ಕರಾವಳಿಯಿಂದ ಶಾಸಕರನ್ನು ಆಯ್ಕೆ ಮಾಡಲು ನಾಚಿಕೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇರುವುದನ್ನು ಸಹಿಸದ ಬಿಜೆಪಿಯವರು ಗಲಭೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.