Spread the love

ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟ 2023ರಲ್ಲಿ ಶ್ರೀಲಂಕಾದ ಪ್ರದರ್ಶನ ನಿರಾಶಾದಾಯಕವಾಗಿದೆ. ಆಡಿದ ಏಳು ಪಂದ್ಯಗಳಲ್ಲಿ ಎರಡು ಗೆದ್ದು ಐದನ್ನು ಸೋತಿರುವ ಲಂಕಾ ಸೆಮಿ ಫೈನಲ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ. ಅದರಲ್ಲೂ ಭಾರತ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದು ಗಾಯದ ಮೇಲೆ ಉಪ್ಪು ಸುರಿದ ಪರಿಸ್ಥಿತಿ ತಂದಿದೆ. ಇದರ ನಡುವೆ ಶ್ರೀಲಂಕಾ ಸರ್ಕಾರವು ಲಂಕಾದ ಸಂಪೂರ್ಣ ಕ್ರಿಕೆಟ್ ಮಂಡಳಿಯನ್ನು ವಜಾ ಮಾಡಿದೆ.

ಭಾರತ ವಿರುದ್ಧದ ಸೋಲಿನ ಬಳಿಕ ಪೂರ್ಣ ಮಂಡಳಿಯನ್ನು ಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಘೆ ವಜಾ ಮಾಡಿದ್ದಾರೆ. ಅಲ್ಲದೆ ಹಂಗಾಮಿ ಸಮಿತಿಯನ್ನು ರಚನೆ ಮಾಡಲಾಗಿದೆ.

1996 ರ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರನ್ನು ಹೊಸ ಹಂಗಾಮಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಏಳು ಜನರ ಸಮಿತಿಯಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ಕೂಡಾ ಸೇರಿದ್ದಾರೆ.

ಕಳೆದ ಗುರುವಾರ ಭಾರತದ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಲಂಕಾ ತಂಡವು 302 ರನ್ ಗಳ ಭಾರೀ ಅಂತರದ ಸೋಲನುಭವಿಸಿತ್ತು. ಜನಾಕ್ರೋಶದ ನಡುವೆ, ಪೂರ್ಣ ಮಂಡಳಿಯು ರಾಜೀನಾಮೆ ನೀಡಬೇಕು ಎಂದು ರಣಸಿಂಘೆ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

ಈ ಸೋಲು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಶನಿವಾರದಂದು ಪ್ರತಿಭಟನೆಗಳ ಕಾರಣದಿಂದ ಕೊಲಂಬೊದಲ್ಲಿನ ಬೋರ್ಡ್ ಕಚೇರಿಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳಿಗೆ ಕಚೇರಿಯಲ್ಲಿ ಉಳಿಯಲು ನೈತಿಕ ಅಥವಾ ನೈತಿಕ ಹಕ್ಕಿಲ್ಲ ಎಂದು ರಣಸಿಂಘೆ ಹೇಳಿದ್ದರು. ಬೋರ್ಡ್ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು. ಈ ಹಿಂದೆ ಮಂಡಳಿಯು ‘ದೇಶದ್ರೋಹಿ ಮತ್ತು ಭ್ರಷ್ಟ’ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *