ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್ ಗಳನ್ನು ಬಾಂಬ್ ನಿಷ್ಕ್ರೀಯ ದಳ ಸ್ಫೋಟಿಸುವ ಮೂಲಕ ತೆರೆದಿದ್ದು, ಯಾವುದೇ ಸ್ಫೋಟಕಗಳು ಇರಲಿಲ್ಲ ಬದಲಾಗಿ ಅನುಮಾನಾಸ್ಪದ ಬಾಕ್ಸ್ನಲ್ಲಿ ಪತ್ತೆಯಾಗಿರುವುದು ಉಪ್ಪು(table salt) ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸಂಜೆ ಏಳು ಗಂಟೆಯಿಂದಲೇ ನಗರದಲ್ಲಿ ಮಳೆ ಶುರುವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಮಧ್ಯರಾತ್ರಿ 2.40ರ ಸುಮಾರಿಗೆ ಒಂದು ಬಾಕ್ಸ್, 3.24 ಸುಮಾರಿಗೆ ಮತ್ತೊಂದು ಬಾಕ್ಸ್ ಬೀಗವನ್ನು ಸ್ಫೋಟಕ ಬಳಸಿ ತೆರೆಯಲಾಯಿತು. ಪ್ರತಿ ಬಾಕ್ಸ್ ನಲ್ಲೂ ಎರಡು ಚೀಲಗಳಲ್ಲಿ ಬಿಳಿ ಬಣ್ಣದ ಪೌಡರ್ ಮಾದರಿ ವಸ್ತು ಇರುವುದು ತಿಳಿದು ಬಂದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ನಮ್ಮ ಬಾಂಬ್ ನಿಷ್ಕ್ರೀಯ ದಳ ಯಶಸ್ವಿಯಾಗಿ ಬಾಕ್ಸ್ ಗಳನ್ನು ಓಪನ್ ಮಾಡಿದ್ದು ಅದರಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ. ನಿರುಪಯುಕ್ತ ವಸ್ತು ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸತತ ಆರು ಗಂಟೆಗಳ ಕಾರ್ಯಾಚರಣೆ ಮೂಲಕ ಬಾಕ್ಸ್ ಓಪನ್ ಮಾಡಲಾಗಿದ್ದು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.