ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಚುನಾವಣೆ ಆಯೋಗವು ಸಿದ್ದತೆ ನಡೆಸಿದ್ದು, ಮತದಾರರ ಪಟ್ಟಿ ಪರಷ್ಕರಣೆ ಪ್ರಕ್ರಿಯೆಯೂ ಸಹ ಆರಂಭವಾಗಿದೆ. 2026ರ ಜನವರಿ 3ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳೊಂದಿಗೆ ಉಪಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2026 ಜನವರಿ 1 ಕ್ಕೆ ಸಂಬಂಧಿಸಿದಂತೆ 2026ರ ಜನವರಿ 3 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು-ಆಕ್ಷೇಪಣೆಗಳಿದ್ದಲ್ಲಿ ಜನವರಿ 24 ರೊಳಗೆ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು 2026 ರ ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪನವರ ನಿಧನದಿಂದ ಕ್ಷೇತ್ರ ತೆರವಾಗಿರುತ್ತದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 113538 ಪುರುಷ, 117479 ಮಹಿಳಾ ಮತದಾರರು ಹಾಗೂ 47 ಇತರೆ ಮತದಾರರು ಸೇರಿದಂತೆ ಒಟ್ಟು 2,31,062 ಮತದಾರಿದ್ದು, ಒಟ್ಟು 217 ಮತಗಟ್ಟಿಗಳನ್ನೊಳಗೊಂಡಿದೆ.
4857 ಯುವ ಮತದಾರರು:
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2497 ಪುರುಷ ಮತ್ತು 2360 ಮಹಿಳಾ ಯುವ ಮತದಾರರಿದ್ದಾರೆ. ಹಾಗೆಯೇ 1395 ಪುರುಷ, 1146 ಮಹಿಳಾ ವಿಶೇಷಚೇತನ ಮತದಾರರು ಸೇರಿದಂತೆ ಒಟ್ಟು 2541 ವಿಶೇಷಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಮತದಾರರು ತಮ್ಮ ಮತಪಟ್ಟಿ ವಿವರಗಳನ್ನು ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ಪರಿಶೀಲಿಸಕೊಳ್ಳಬಹುದಾಗಿದೆ. ಮತದಾರರು ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಫೋಟೊ ಬದಲಾವಣೆ ಹಾಗೂ ಸ್ಥಳಾಂತರಗೊಂಡಿದ್ದಲ್ಲಿ ನಮೂನೆ-8ರ ಅರ್ಜಿಯನ್ನು ವೋಟರ್ ಹೆಲ್ಪ್ ಲೈನ್ ಮುಖಾಂತರ ಸಲ್ಲಿಸಬಹುದು ಎಂದು ತಿಳಿಸಿದರು.
ಯುವ ಮತದಾರರು ವೋಟರ್ ಹೆಲ್ಪ್ ಲೈನ್ ಆಪ್ ಮುಖಾಂತರ ನಮೂನೆ-6ರ ಅರ್ಜಿಯನ್ನು ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ಆನ್ಲೈನ್ https://voters.eci.gov.in/ ಮುಖಾಂತರ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
