Trending

ರೈತನನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ನೀಡಿ : ಸಿದ್ದರಾಮಯ್ಯಗೆ ರೈತ ಮುಖಂಡರ ಮನವಿ

Spread the love

ಬೆಂಗಳೂರು: ರೈತನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ರಾಜ್ಯ ಬಜೆಟ್ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಲಾಗಿದ್ದು, ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಬೇಕು ಎಂದು ರೈತರು ಸಿಎಂಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ರಾಜ್ಯದ ರೈತ ಸಂಘ ಸಂಸ್ಥೆಗಳ ಸುಮಾರು 218 ಮಂದಿ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ ಬಜೆಟ್‌ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ರೈತರು ಅನೇಕ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟಿದ್ದಾರೆ. ಸಭೆ ಬಳಿಕ ಮಾತನಾಡಿದ ಬಡಗಲಪುರ ನಾಗೇಂದ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಜೊತೆಗೆ ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿಯನ್ನು ರೂಪಿಸಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದರು.

ಕೃಷಿ ಕ್ಷೇತ್ರ ಇಂದು ದಿಕ್ಕು ತಪ್ಪಿದೆ. ವ್ಯವಸಾಯವನ್ನು ಉಳಿಸಲು ಬಜೆಟ್ನಲ್ಲಿ ಹೆಚ್ಚಿನ ಒತ್ತು ಕೊಡಬೇಕು. ರೈತರ ಪರ ಬಜೆಟ್ ನೀಡಬೇಕು. ಪ್ರಮುಖವಾಗಿ ಬರದ ಸಮಸ್ಯೆ ಇದೆ. ಬರಕ್ಕೆ ಶಾಶ್ವತವಾಗಿ ಪರಿಹಾರ ಸಿಗಬೇಕಾದರೆ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. ಇದಕ್ಕಾಗಿ 10 ವರ್ಷದ ಕಾರ್ಯಯೋಜನೆಯನ್ನು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು, ಕೃಷಿಕರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ಹೀಗಾಗಿ 45 ವರ್ಷವಾದರೂ ಮದುವೆ ಆಗುತ್ತಿಲ್ಲ. ಈ ಸಮಸ್ಯೆಗೆ ಪ್ರಮುಖ ಕಾರಣ ಕೃಷಿಗೆ ಆದ್ಯತೆ ಸಿಗುತ್ತಿಲ್ಲ ಎಂಬುದಾಗಿದೆ. ಹೀಗಾಗಿ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಐದು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

[pj-news-ticker]