ಶಂಕರಘಟ್ಟ : ಕನ್ನಡವೆಂದರೆ ಬದುಕಿನ ಕ್ರಮ. ಕನ್ನಡ ಭಾಷೆ ಕರುಣೆಯಷ್ಟು ಸಹಜವಾದುದು. ಹಾಗಾಗಿ ಕನ್ನಡವನ್ನು ಬರಿಯ ನುಡಿಯೆಂದು ಭಾವಿಸದೆ ಅದನ್ನೊಂದು ಜೀವನಶೈಲಿ ಎಂದು ಭಾವಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಗೋಪಿನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನಮ್ಮ ದಿನನಿತ್ಯದ ಬದುಕಿನಲ್ಲಿ ಬೆರೆತು ಹೋಗಬೇಕು. ಆಗ ನಮ್ಮಲ್ಲಿ ಕನ್ನಡತನದ ಸಮಷ್ಢಿ ಪ್ರಜ್ಞೆ ಜಾಗೃತವಾಗಿರುತ್ತದೆ ಎಂದರು.
ಕನ್ನಡ ಭಾರತಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡ ಮತ್ತು ಕನ್ನಡಿಗರ ಶ್ರೇಷ್ಠ ಪರಂಪರೆಯನ್ನು ಮುಂದುವರೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ ನಾಯಕ, ಅಂತರಿಕ ಗುಣಮಟ್ಟ ನಿರ್ವಹಣಾ ಕೋಶದ ನಿರ್ದೇಶಕ ಡಾ. ಎನ್.ಬಿ. ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಎನ್.ಡಿ. ವಿರೂಪಾಕ್ಷ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು. ಡಾ. ನವೀನ್ ಮಂಡಗದ್ದೆ ನಿರೂಪಿಸಿ, ಡಾ. ಪುರುಷೋತ್ತಮ್ ಎಸ್.ವಿ.ಪ್ರಾರ್ಥಿಸಿದರು. ಡಾ. ರವಿನಾಯಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರ ನಿಗದಿಪಡಿಸಿದ ಐದು ಕನ್ನಡದ ಗೀತೆಗಳ ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಲಾಯಿತು.