Trending

ಸೊರಬ : ಕುರಿ ಶೆಡ್ ನಿರ್ಮಾಣದ ಹೆಸರಿನಲ್ಲಿ ರೈತನಿಗೆ ₹5.50 ಲಕ್ಷ ವಂಚನೆ : ಆರೋಪಿ ಬಂಧನ

Spread the love

ಸೊರಬ : ಕುರಿ ಶೆಡ್ ನಿರ್ಮಿಸಿಕೊಡುವುದಾಗಿ ನಂಬಿಸಿ ರೈತನೊಬ್ಬನಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ನಡೆಸಿ, ಬಳಿಕ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಸೊರಬ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹5.20 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಸೊರಬ ತಾಲೂಕಿನ ಇಂಡಿಹಳ್ಳಿ ಗ್ರಾಮದ ರೈತ ಅಣ್ಣಪ್ಪ ಜೆ. (30) ಅವರು ಕುರಿ ಶೆಡ್ ನಿರ್ಮಾಣಕ್ಕಾಗಿ ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದ ಸುರೇಶ ಬಿನ್ ಚೌಡಪ್ಪ ಎಂಬಾತನಿಗೆ ಗುತ್ತಿಗೆ ನೀಡಿದ್ದರು. ₹6 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿಕೊಡುವುದಾಗಿ ಒಪ್ಪಿಕೊಂಡಿದ್ದ ಆರೋಪಿ, ಆರಂಭದಲ್ಲಿ ಮುಂಗಡವಾಗಿ ₹20,000 ಹಾಗೂ ಕಟ್ಟಡ ಸಾಮಗ್ರಿ ಖರೀದಿಗಾಗಿ ₹70,000 ಪಡೆದುಕೊಂಡಿದ್ದನು.

ನಂತರ ವಿವಿಧ ಕಂತುಗಳಲ್ಲಿ ಹಾಗೂ ಆನ್‌ಲೈನ್ ಬ್ಯಾಂಕಿಂಗ್ (RTGS/Yes Bank ಖಾತೆ) ಮೂಲಕ ಒಟ್ಟು ₹5.50 ಲಕ್ಷ ಹಣವನ್ನು ಪಡೆದುಕೊಂಡಿದ್ದರೂ, ಯಾವುದೇ ಕಟ್ಟಡ ಸಾಮಗ್ರಿ ತರದೇ ಹಾಗೂ ಶೆಡ್ ನಿರ್ಮಿಸದೇ ರೈತನನ್ನು ಸತಾಯಿಸುತ್ತಿದ್ದನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಣ ವಾಪಸ್ ಕೇಳಿದಾಗ ಆರೋಪಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಂಡು ಸಂಪರ್ಕ ತಪ್ಪಿಸಿಕೊಂಡಿದ್ದನು. ಬಳಿಕ ಸಂಪರ್ಕಿಸಿದ ವೇಳೆ, “ಶೆಡ್ ನಿರ್ಮಿಸಿಕೊಡುವುದಿಲ್ಲ, ಹಣವನ್ನೂ ಹಿಂದಿರುಗಿಸುವುದಿಲ್ಲ. ಮನೆ ಬಳಿ ಬಂದು ಕೇಳಿದರೆ ಜೀವಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ರೈತ ಅಣ್ಣಪ್ಪ ಅವರು ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(3), 352 ಹಾಗೂ 351(2) ಅಡಿಯಲ್ಲಿ ಕ್ರೈಂ ನಂ. 108/2026 ದಾಖಲಿಸಲಾಗಿದೆ.

ದೂರು ದಾಖಲಾದ ತಕ್ಷಣ ಪಿಎಸ್‌ಐ ನವೀನ್ ಎಂ.ಎಚ್. ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಆರೋಪಿಯಿಂದ ₹5.20 ಲಕ್ಷ ನಗದು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಮುಂದುವರಿದಿದೆ.

 

[pj-news-ticker]