ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಪ್ರಸ್ತುತ ವಿಶ್ವಕಪ್ ನಡೆಯುತ್ತಿರುವಾಗಲೇ ಅತ್ಯಂತ ಅಪಾಯಕಾರಿ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಅವರ ಈ ಕೃತ್ಯ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹಲವರು ಟೀಕಿಸಿದ್ದಾರೆ.
ಗುರುವಾರ ಬಾಂಗ್ಲಾ ವಿರುದ್ಧ ಪುಣೆಯಲ್ಲಿ ಭಾರತದ ಪಂದ್ಯವಿದೆ. ಈ ಹೊತ್ತಿನಲ್ಲೇ ಅವರು ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಚಾರಿ ಪೊಲೀಸರು ಮೂರು ಬಾರಿ ದಂಡ ಹಾಕಿದ್ದಾರೆ! ಸಂಚಾರಿ ಇಲಾಖೆಯ ನಿಯಮಗಳ ಪ್ರಕಾರ, ರೋಹಿತ್ ಭಾರತ ಕ್ರಿಕೆಟ್ ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕು. ಆದರೆ ಯಾವ ಕಾರಣಕ್ಕೆ ಬಿಸಿಸಿಐ ರೋಹಿತ್‌ಗೆ ಸ್ವಂತ ಕಾರಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿದೆ ಎನ್ನುವುದು ಗೊತ್ತಾಗಿಲ್ಲ.
ರೋಹಿತ್‌ಗೆ ದುಬಾರಿ ಕಾರುಗಳನ್ನು ವೇಗದಲ್ಲಿ ಓಡಿಸುವ ತೀವ್ರ ಆಸಕ್ತಿಯಿದೆ. ಆದರೆ ವಿಶ್ವಕಪ್ ನಡೆಯುತ್ತಿರುವ ಹೊತ್ತಿನಲ್ಲಿ ಇಂತಹ ಅಪಾಯಕಾರಿ ಸಾಹಸ ಕೈಗೊಳ್ಳುವುದು ಬಿಸಿಸಿಐ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ಪ್ರಕರಣದಲ್ಲಿ ಬಿಸಿಸಿಐ ಕೂಡ ಆರೋಪಿ ಎಂದು ಕೆಲವರು ಹೇಳುತ್ತಾರೆ.
ಇದು ಕ್ರಿಕೆಟಿಗನ ವಿರಾಮದ ದಿನಗಳು ಅಲ್ಲವೇ ಅಲ್ಲ. ಅತಿವೇಗದಿಂದ ಒಂದು ಅವಘಡ ನಡೆದರೆ, ಬರೀ ರೋಹಿತ್ ಮಾತ್ರವಲ್ಲ ಇಡೀ ಕೂಟವೇ ಇಕ್ಕಟ್ಟಿಗೆ ಸಿಲುಕುತ್ತದೆ. ರಿಷಭ್ ಪಂತ್ ಅವರ ಭೀಕರ ಅಪಘಾತ ನೆನಪಿನಲ್ಲಿರುವಾಗಲೇ, ರೋಹಿತ್ ನಡೆಸಿದ ಈ ಬೇಜವಾಬ್ದಾರಿ ಕೃತ್ಯ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.