ಬೆಂಗಳೂರು: ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬೆಳಕು ಚೆಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ಧತೆ ನಡೆಸುತ್ತಿರುವ ಸೂಚನೆಗಳು ಸಿಗುತ್ತಿದ್ದಂತೆಯೇ ಪಕ್ಷದಲ್ಲಿರುವ ಬಂಡಾಯ ನಾಯಕರ ಮತ್ತೊಂದು ಬಣ ಪಕ್ಫ್ ವಿವಾದ ಕುರಿತ 2ನೇ ಸುತ್ತಿನ ಹೋರಾಟ ಆರಂಭಿಸಲು ಮುಂದಾಗಿದೆ.
ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಯತ್ನಾಳ್ ಬಣದ ಮುಖಂಡರು ಸುದೀರ್ಘ ಸಮಾಲೋಚನೆ ನಡೆಸಿದರು.
ಯತ್ನಾಳ್ ಸೇರಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಪಿ.ಹರೀಶ್, ಮುಖಂಡ ಎನ್.ಆರ್.ಸಂತೋಷ್ ಅವರು ಉಪಸ್ಥಿತರಿದ್ದರು.
ಯತ್ನಾಳ್ ಬಣದ ನಾಯಕರು ಜನವರಿ ತಿಂಗಳಿನಲ್ಲಿ ನವದೆಹಲಿಗೆ ಭೇಟಿ ನೀಡಲಿದ್ದು, ಈ ಸಂದರ್ಭ ವಕ್ಫ್ ಮಸೂದೆ ಕುರಿತು ಸಂಗ್ರಹಿಸಿದ ಮಾಹಿತಿಗಳನ್ನು ಜಗದಾಂಬಿಕ ಪಾಲ್ ಅವರಿಗೆ ಸಲ್ಲಿಸಲಿದ್ದಾರೆ. ಇದೇ ವೇಳೆ ಬಿಜೆಪಿ ಹೈಕಮಾಂಡ್ ನ ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
