Spread the love

ಬೆಂಗಳೂರು: ವಂಚನೆ ಆರೋಪದಡಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯೊಬ್ಬರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪ ಅವರ ವಿರುದ್ಧ ಕೇಳಿಬಂದಿದೆ.

ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಕುಂದಾಪುರ ಹೇಳಿದಂತೆ ಆಗಾಗ ಬೆಂಗಳೂರಿಗೆ ಬರುತ್ತಿದ್ದರು.

ಇಲ್ಲಿ ಚೈತ್ರಾ ಕುಂದಾಪುರ ಕೆಲವರನ್ನು ತೋರಿಸಿ ಇವರಿಗೆ ಹೈಕಮಾಂಡ್ ನಾಯಕರ ಜೊತೆ ನಿಕಟ ಸಂಪರ್ಕವಿದ್ದು, ಇವರು ಹೇಳಿದರೆ ಟಿಕೆಟ್ ಕೊಡಿಸುತ್ತಾರೆ ಎಂದು ಮಾತಿನ ಮೂಲಕ ಮರುಳು ಮಾಡಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿ ಅವರು ಟಿಕೆಟ್ ಸಿಗತ್ತೆ ಅನ್ನುವ ಆಸೆಗೆ ಕೇಳಿದಷ್ಟು ಹಣ ಕೊಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಕುಂದಾಪುರ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದಾರೆ.

ಗೋವಿಂದಬಾಬು ಪೂಜಾರಿ ದೂರಿನ ಆಧಾರದ ಮೇಲೆ ಸದ್ಯ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *