ನವದೆಹಲಿ: ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ಮಾಜಿ ಸಚಿವ, ಆಪ್ ನ ಪ್ರಭಾವಿ ಮುಖಂಡ ಕೈಲಾಶ್ ಗೆಹ್ಲೋಟ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಹರ್ಯಾಣ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ದೆಹಲಿ ಬಿಜೆಪಿ ವರಿಷ್ಠ ವೀರೇಂದ್ರ ಸಚ್ ದೇವ್ ಹಾಗೂ ಇತರ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನಜಾಫ್ ಗಢ್ ಶಾಸಕ ಕೈಲಾಶ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಅವರ ಮುಂದಿನ ರಾಜಕೀಯ ನಡೆ ಕುರಿತ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.
ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ ಗೆ ಆಪ್ತರಾಗಿದ್ದ ಕೈಲಾಶ್ ಗೆಹ್ಲೋಟ್ ಭಾನುವಾರ ತಕ್ಷಣಕ್ಕೆ ಅನ್ವಯವಾಗುವಂತೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನಂತರ ದೆಹಲಿ ಮುಖ್ಯಮಂತ್ರಿ ಅತಿಶಿ ರಾಜೀನಾಮೆಯನ್ನು ಸ್ವೀಕರಿಸಿದ್ದರು.
ಗೆಹ್ಲೋಟ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಂಗ್ಲೋಯ್ ಜಾಟ್ ಕ್ಷೇತ್ರದ ಶಾಸಕ ರಘುವಿಂದರ್ ಶೂಕೀನ್ ಅವರನ್ನು ಸಚಿವ ಸ್ಥಾನಕ್ಕೆ ನೇಮಕ ಮಾಡುವುದಾಗಿ ಆಪ್ (AAP) ಘೋಷಿಸಿದೆ.
