ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರಿದಾಬಾದ್‌ನಲ್ಲಿ 360 ಕೆಜಿ ಸ್ಫೋಟಕ ವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಡಾ. ಮುಜಮ್ಮಿಲ್ ಮತ್ತು ಮತ್ತೊಬ್ಬ ಆರೋಪಿ ಆದಿಲ್ ರಾಥರ್ ಬಂಧಿತರಾಗಿದ್ದಾರೆ. ವಶಕ್ಕೆ ಪಡೆದ ಸ್ಫೋಟಕವು ಬಹುಶಃ ಅಮೋನಿಯಂ ನೈಟ್ರೇಟ್ ಆಗಿದ್ದು, ಇದು ಆರ್‌ಡಿಎಕ್ಸ್ ಅಲ್ಲ ಎಂಬುದು ಪ್ರಾಥಮಿಕ ಮಾಹಿತಿ. 360 ಕೆಜಿ ಸ್ಫೋಟಕವಿರುವ 8 ದೊಡ್ಡ ಮತ್ತು 4 ಸಣ್ಣ ಸೂಟ್‌ಕೇಸ್‌ಗಳು ಹಾಗೂ ಒಂದು ಬಕೆಟ್ ಜಪ್ತಿ ಮಾಡಲಾಗಿದೆ.
ಇದಲ್ಲದೆ,
• ಒಂದು ಅಸಾಲ್ಟ್ ರೈಫಲ್
• 3 ಮ್ಯಾಗಜೀನ್‌ಗಳು
• 83 ಲೈವ್ ಕಾರ್ಟ್ರಿಡ್ಜ್‌ಗಳು
• ಒಂದು ಪಿಸ್ತೂಲ್
• 8 ಲೈವ್ ರೌಂಡ್‌ಗಳು
• ಟೈಮರ್‌ಗಳು, ಬ್ಯಾಟರಿಗಳು
• ವಾಕಿ-ಟಾಕಿ ಸೆಟ್‌ಗಳು
• ಹೆವಿ ಮೆಟಲ್ ಘಟಕಗಳು
ಇವುಗಳನ್ನು ವಶಕ್ಕೆ ಪಡೆಯಲಾಗಿದೆ.
ಆದಿಲ್ ರಾಥರ್ ಬಂಧನದ ನಂತರ ಜಿಎಂಸಿ ಶ್ರೀನಗರದ ಲಾಕರ್‌ನಿಂದ ಎಕೆ-47 ರೈಫಲ್ ಪತ್ತೆಯಾಗಿದ್ದದರಿಂದ ಪ್ರಕರಣ ಮತ್ತಷ್ಟು ಗಂಭೀರಗೊಂಡಿದೆ. ರಾಥರ್ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಡಾ. ಮುಜಮ್ಮಿಲ್ ಬಂಧನ ನಡೆದಿದೆ ಎಂದು ತಿಳಿಸಿದ್ದಾರೆ.
ಹದಿನೈದು ದಿನಗಳಿಂದ ಹಲವಾರು ಶಂಕಿತರ ವಿಚಾರಣೆ, ಮನೆ ಶೋಧಗಳು, ಮತ್ತು ಜಂಟಿ ತನಿಖಾ ಕೇಂದ್ರದ (ಜೆಐಸಿ) ಕಾರ್ಯಾಚರಣೆ ಮುಂದುವರಿದಿವೆ. ಭಯೋತ್ಪಾದನೆ ಮತ್ತು ಅದರ ಬೆಂಬಲ ಜಾಲವನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಕುಲ್ಗಾಮ್ ಪೊಲೀಸರು ಕಟ್ಟುನಿಟ್ಟಿನ ಶೂನ್ಯ-ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದಾರೆ.
