ಬೆಂಗಳೂರು: 11 ವರ್ಷದ ಬಾಲಕನ ಮೇಲೆ ಶಿಕ್ಷಕಿಯೊಬ್ಬಳು ಹಲ್ಲೆ ನಡೆಸಿ, ಹಲ್ಲು ಮುರಿಯುವಂತೆ ಹೊಡೆದಿರುವ ಘಟನೆಯೊಂದು ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಆರನೇ ತರಗತಿ ವಿದ್ಯಾರ್ಥಿ ಅಶ್ವಿನ್ (11) ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿ ಆತನ ತಂದೆ ಅನಿಲ್ ಕುಮಾರ್ ವಿ. ಪೈ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.
ನ.7ರಂದು ಅಶ್ವಿನ್ ಜೊತೆ ಇತರ ವಿದ್ಯಾರ್ಥಿಗಳು ತರಗತಿಯಲ್ಲಿ ಗೋಸ್ಮಿಕ್ (ಗಮ್) ಮತ್ತು ನೀರು ಚೆಲ್ಲುತ್ತಾ ಆಡುತ್ತಿದ್ದರು. ಈ ವಿಚಾರವನ್ನು ಶಿಕ್ಷಕಿ ಅಸ್ಮತ್ ಅವರಿಗೆ ತಿಳಿಸಲು ಅಶ್ವಿನ್ ತೆರಳಿದ್ದು, ಅಶ್ವಿನ್ ಮುಖಕ್ಕೆ ಶಿಕ್ಷಕಿ ಕೋಲಿನಿಂದ ಹೊಡೆದಿದ್ದಾರೆ. ಈ ವೇಳೆ ಹಲ್ಲು ಮುರಿದಿದೆ. ನಂತರ ಶಾಲಾ ಆಡಳಿತ ಮಂಡಳಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಪೋಷಕರಿಗೆ ವಿಚಾರ ತಿಳಿಸಿ, ಕ್ಷಮೆ ಯಾಚಿಸಿದ್ದಾರೆಂದು ತಿಳಿದುಬಂದಿದೆ.
ಶಿಕ್ಷಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.