Trending

ನಾಗಸಾಧುಗಳ ಸೋಗಿನಲ್ಲಿ ವ್ಯಕ್ತಿಯ ಚಿನ್ನದುಂಗುರ ದೋಚಿದ ಖದೀಮರು

Spread the love

ಬೆಂಗಳೂರು: ನಾಗಸಾಧುಗಳ ವೇಷ ಧರಿಸಿ ಆರ್ಶೀವಾದ ಮಾಡುವ ಸೋಗಿನಲ್ಲಿ ವ್ಯಕ್ತಿಯ ಚಿನ್ನದುಂಗುರ ಕಳವು ಮಾಡಿ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಂಚನೆಗೊಳಗಾದ ಅರುಣ್ ಶ್ರೀಪಾದ ಎಂಬವರು ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯನಗರದ ಆರ್​​ಪಿಸಿ ಲೇಔಟ್​​ನಲ್ಲಿ ಜೂ.12ರಂದು ಘಟನೆ ನಡೆದಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?: ಸ್ನೇಹಿತೆಯ ಕಚೇರಿಗೆ ಕೆಲಸದ ನಿಮಿತ್ತ ಅರುಣ್ ಬಂದಿದ್ದರು. ಈ ವೇಳೆ ನಾಗಸಾಧುಗಳಂತೆ ಆರೋಪಿಗಳೂ ಕಚೇರಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ವಿಚಾರಿಸಿ ಅರುಣ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕಾಶಿ, ಅಯೋಧ್ಯೆ ಹಾಗೂ ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳು ಹಾಗೂ ನದಿಗಳ ಬಗ್ಗೆ ಮಾತನಾಡುತ್ತಾ, ಈ ಕ್ಷೇತ್ರಗಳಲ್ಲಿ ಸ್ನಾನ ಮಾಡಿದ್ದೀರಾ ಎಂದು ಕೇಳಿದ್ದಾರೆ. ಬಳಿಕ‌ ಕುಟುಂಬ ಹಾಗೂ ವ್ಯವಹಾರದ ಬಗ್ಗೆ ಮಾತನಾಡಿ ಆರ್ಶೀವಾದ ಮಾಡಿದರೆ ಒಳ್ಳೆಯದಾಗಲಿದೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅರುಣ್, ನನಗೆ ನಮ್ಮ‌ ದೇವರಿದ್ದಾನೆ ಎಂದು ಹೇಳಿದ್ದೆ. ಬಳಿಕ ಪೇಪರ್​​ನಲ್ಲಿ ವಿಭೂತಿ ಹಾಕಿ ನನ್ನ ಹಣೆ ಮೇಲೆ ತ್ರಿಶೂಲ ಇಟ್ಟರು. ಆರ್ಶೀವಾದ ಮಾಡುವ ನೆಪದಲ್ಲಿ ಎಡಗೈನಲ್ಲಿದ್ದ 11 ಗ್ರಾಂ ಉಂಗುರ ತೆಗೆದುಕೊಂಡರು. ಈ ವೇಳೆ ಏನಾಯಿತು ಎಂದು ಗೊತ್ತಾಗಿಲ್ಲ. ಮನೆಗೆ ಹೋದಾಗ ಉಂಗುರ ಕಾಣೆಯಾಗಿರುವುದು ಅರಿವಿಗೆ ಬಂತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

[pj-news-ticker]