ಶಿವಮೊಗ್ಗ: ಇತ್ತೀಚೆಗೆ ಹೊನ್ನಾಳ್ಳಿಯಲ್ಲಿ ನಡೆದಿದ್ದ ಬ್ಯಾಂಕ್ ಕಳ್ಳತನದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಬ್ಯಾಂಕ್ ಹಾಗೂ ಎಟಿಎಂಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ, ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಿಸುವಂತೆ ಎಸ್‌ಪಿ ಮಿಥುನ್ ಕುಮಾರ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿಎಆರ್ ಸಭಾಂಗಣದಲ್ಲಿ 90ಕ್ಕೂ ಹೆಚ್ಚು ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಈ ವೇಳೆ ನ್ಯಾಮತಿಯಲ್ಲಿ ಇತ್ತೀಚೆಗೆ ಬ್ಯಾಂಕ್ ಲೂಟಿಯಾದ ಉದಾಹರಣೆ ನೀಡಿ, ಭದ್ರತಾ ವ್ಯವಸ್ಥೆ ಇಲ್ಲದ ಬ್ಯಾಂಕ್‌ನಲ್ಲಿ ಕಳುವಾಗಿದೆ. ಅದಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂ ಬಳಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಬ್ಯಾಂಕ್ ಮತ್ತು ಎಟಿಎಂಗೆ ಸಿಸಿಟಿವಿ ಅಳವಡಿಕೆಗೆ ಹಣ ಬರುವುದಿಲ್ಲ ಎಂದರೆ ಅದಕ್ಕೆ ಪೊಲೀಸ್ ಇಲಾಖೆ ಜವಬ್ದಾರಿಯಲ್ಲ ಎಂದು ಎಚ್ಚರಿಸಿದರು.
ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಎಟಿಎಂ ಲೂಟಿಗಳಲ್ಲಿ ಸುರಕ್ಷತೆಯ ಕೊರತೆಗಳು ಎದ್ದು ಕಾಣುತ್ತಿದೆ. ವಿನೋಬ ನಗರದಲ್ಲಿ ಎಟಿಎಂನ್ನು ಜೆಸಿಬಿ ಮೂಲಕ ಲೂಟಿ ಮಾಡಲು ಯತ್ನಿಸಿದ ಪ್ರಕರಣ ಇತ್ತೀಚಿಗೆ ನಡೆದಿತ್ತು. ಅಲ್ಲದೇ ಬ್ಯಾಂಕ್‌ನಲ್ಲಿಯೇ ಕಳ್ಳತನ ನಡೆದಿತ್ತು. ಕೆಲ ಬ್ಯಾಂಕ್‌ನವರಿಗೆ ನಮ್ಮ ಬ್ಯಾಂಕ್‌ನಲ್ಲಿ ಇದುವರೆಗೂ ಕಳುವಾಗಿಲ್ಲ ಎಂಬ ಭಾವನೆ ಇದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಅರ್ಹ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ತಿಳಿಸಿದ್ದಾರೆ.
ರಜಾದಿನಗಳಲ್ಲಿ ಕೆಲವು ಬ್ಯಾಂಕ್‌ಗಳಲ್ಲಿ ಕಳ್ಳತನ ನಡೆದಿದೆ. ರಜೆ ಇರುವ ಸಂದರ್ಭದಲ್ಲಿ ಸಿಸಿ ಟಿವಿಯನ್ನ ಗಂಟೆಗೆ ಒಮ್ಮೆ ತಪಾಸಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.