ಮುಂಬೈ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ನಟ ಸಲ್ಮಾನ್ ಖಾನ್ ಗೆ ಹಲವಾರು ಬಾರಿ ಕೊಲೆ ಬೆದರಿಕೆಗಳು ಬಂದಿರುವ ಬೆನ್ನಲ್ಲೇ ಇದೀಗ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಗೂ ಗುರುವಾರ ಕೊಲೆ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಯಪುರದ ವ್ಯಕ್ತಿಯಿಂದ ಬೆದರಿಕೆ:
ಮೂಲಗಳ ಪ್ರಕಾರ ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಕಚೇರಿಗೆ ಕರೆ ಬಂದಿದ್ದು ಈ ವೇಳೆ ಕರೆ ಮಾಡಿದ ವ್ಯಕ್ತಿ ಐವತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ ಇಲ್ಲದೇ ಹೋದರೆ ನಟನನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಕೂಡಲೇ ಕಚೇರಿ ಸಿಬ್ಬಂದಿ ಮುಂಬೈ ನ ಬಾಂದ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕರೆ ಛತ್ತೀಸ್ಗಢ ರಾಯ್ಪುರದಿಂದ ಬಂದಿರುವುದು ಗೊತ್ತಾಗಿದ್ದು ಮೊಬೈಲ್ ನಂಬರ್ ಪರಿಶೀಲಿಸಿದಾಗ ಫೈಜಾನ್ ಖಾನ್ ಎಂದು ತಿಳಿದು ಬಂದಿದ್ದು ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಹಿಂದೆಯೂ ಶಾರುಖ್ ಖಾನ್ ಅವರಿಗೆ ಬೆದರಿಕೆಗಳು ಬಂದಿದ್ದು ಮುಂಬೈ ಪೊಲೀಸರು Y+ ಭದ್ರತೆ ನೀಡಿದ್ದರು ಈ ನಡುವೆ ಬೆದರಿಕೆಗಳು ಬಂದಿರುವುದು ಸಂಚಲನ ಮೂಡಿಸಿದೆ.